ಜನಗಣಮನ

14/03/2010

ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ…!?

Filed under: ಕನ್ನಡ — ರಾಕೇಶ್ ಶೆಟ್ಟಿ @ 5:18 ಫೂರ್ವಾಹ್ನ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು’
ಅಂತ ‘ಹುಯಿಲಗೋಳ ನಾರಾಯಣರಾಯ’ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

‘ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’
ಅಂತ ಏಕೀಕರಣದ ನಂತರ ಬರೆದವರು ‘ಸಿದ್ದಯ್ಯ ಪುರಾಣಿಕ್’.

ಇವೆರಡು ಹಾಡುಗಳನ್ನ ವರ್ಷಕ್ಕೊಮ್ಮೆ ರಾಜ್ಯೋತ್ಸವದ ದಿನಗಳಲ್ಲಿ(ದಿನಗಳಲ್ಲಾದರೂ!) ನಾವು ಹಾಗೂ ನಮ್ಮ ರಾಜಕಾರಣಿಗಳು ನೆನಪಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕೆಳಗೆ ಇನ್ನೊಂದು ನತದೃಷ್ಟ ಹಾಡಿದೆ ನೋಡಿ.ಬಹಳಷ್ಟು ಜನ ಇದನ್ನ ಮರೆತಿದ್ದಾರೆ, ಹಲವರಿಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ,ಇನ್ನುಳಿದವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

‘ಬೆಂಕಿ ಬಿದ್ದಿದೆ ನಮ್ಮ ಮನೆಗೆ
ಓ ಬೇಗ ಬನ್ನಿ
ಕನ್ನಡ ಗಡಿಯ ಕಾಯೋಣ ಬನ್ನಿ
ಕನ್ನಡ ನುಡಿಯ ಕಾಯೋಣ ಬನ್ನಿ’

ಅಂತ ಬರೆದ ‘ಕಯ್ಯಾರ ಕಿಞಞಣ್ಣ ರೈ’ ಇಡಿ ಕಾಸರಗೋಡಿನ ಜನತೆಯ ನೋವನ್ನ ಈ ಸಾಲುಗಳಲ್ಲಿ ಅಭಿವ್ಯಕ್ತ ಪಡಿಸಿದ್ದರು.

ಮೊದಲ ಹಾಡು ಕನ್ನಡಿಗರ ಒಗ್ಗೂಡುವಿಕೆಯ ತುಡಿತವನ್ನ ಬಿಂಬಿಸಿದರೆ ,ಎರಡನೆಯದು ‘ಕರ್ನಾಟಕ ಏಕೀಕರಣದ ವಿಜಯದ (ಭಾಗಶಃ) ಸಂಕೇತ ಮತ್ತು ಮೂರನೆಯದು ‘ಕರ್ನಾಟಕದ ಕಾಸರೋಗೋಡಿನ (?) ಜನರ ನೋವಿನ’ ಸಂಕೇತ.

೨ ತಿಂಗಳ ಹಿಂದೆ ಭರ್ಜರಿಯಾಗಿ ನಮ್ಮ ೫೪ನೆ ವರ್ಷದ ರಾಜ್ಯೋತ್ಸವವನ್ನ ಆಚರಿಸಿದೆವು.ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು ಮತ್ತದು ಮುಂದಿನ ನವೆಂಬರ್ವರೆಗೆ ನಡೆಯುತ್ತಲೇ ಇರುತ್ತದೆ.ರಾಜ್ಯದ ಹಲವೆಡೆ ನಡೆಯುವ ಆಚರಣೆಗಳು ಪತ್ರಿಕೆ,ಟೀ.ವಿ ಗಳಲ್ಲಿ ವರದಿಯಾಗುತ್ತದೆ.ಅದೇ ದಿನ ಬೆಳಗಾವಿ ಕಡೆ ಕೆಲವರು ಭಗವಾಧ್ವಜ ಹಾರಿಸುತ್ತಾರೆ ಅದೂ ಸುದ್ದಿಯಾಗುತ್ತದೆ.ಕೊಡಗು,ಹೈದರಾಬಾದ್ ಕರ್ನಾಟಕದಲ್ಲಿ ಕರಾಳ ದಿನ ಅಂತಾರೆ ಅದೂ ಸಣ್ಣದಾಗಿಯಾದರೂ ಸುದ್ದಿಯಾಗುತ್ತದೆ.ಆದರೆ ಅಲ್ಲೊಂದು ‘ಕಾಸರಗೋಡು’ ಅಂತ ಇದೆ ನೋಡಿ.ಆ ಜನರ ಕೂಗು ಪತ್ರಿಕೆ, ಟೀ.ವಿ ಯವರಿಗೆ ಬಿಡಿ, ಕಡೆಗೆ ಅವರ ಪಕ್ಕದಲ್ಲೇ ಇರುವ ‘ದಕ್ಷಿಣ ಕನ್ನಡ’ದ ಜನರಿಗೆ,ರಾಜಕಾರಣಿಗಳಿಗೆ, ನಮ್ಮ ಮಹಾನ್ ಕರ್ನಾಟಕದ ಸರ್ಕಾರಕ್ಕೆ,ಕನ್ನಡಪರ ಹೋರಾಟಗಾರರಿಗೆ,ಸಂಘಟನೆಗಳಿಗೆ ಯಾರಂದ್ರೆ ಯಾರಿಗೂ ಕಾಣುವುದೇ ಇಲ್ಲ. ತೀರ ಕೆಲ ತಿಂಗಳುಗಳ ಹಿಂದೆ ‘ಕಾಸರಗೋಡು ಹೋರಾಟವನ್ನ ಬೆಂಗಳೂರಿಗೆ ತರುತ್ತೇವೆ’ ಅನ್ನುವ ಹೇಳಿಕೆಗಳು ಬಂದಿದ್ದವಾದರು ಅವು ಹೇಳಿಕೆಗಳಾಗೆ ಉಳಿದಿವೆ.ನವೆಂಬರ್ನಲ್ಲೊಂದು ಆರ್ಕೆಸ್ಟ್ರಾ ಮಾಡಿ ‘ರಾಜ್ಯೋತ್ಸವ’ ಆಚರಿಸಿ ಬಿಟ್ರೆ ಸಾಕಾ? ಗಡಿಯ ಅಂಚಿನಲ್ಲಿ ಅದೆಷ್ಟು ಕನ್ನಡ ಶಾಲೆಗಳಿವೆ?ಅಲ್ಲಿನ ಸ್ಥಿತಿ-ಗತಿಗಳೇನು?ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಇನ್ನ ಸರ್ಕಾರದವರನ್ನ ಕೇಳಲೇಬೇಡಿ ಬಿಡಿ ಪಾಪ ಅವರದು ‘ಕುರ್ಚಿ’ಗಾಗಿ ನಿರಂತರ ಹೋರಾಟ!.ರಾಷ್ಟ್ರ ಕವಿ ಕುವೆಂಪು ಅವರ ಭಾವ ಚಿತ್ರವನ್ನ ಹಾಕಿಕೊಂಡು ಹೋರಾಟ ಮಾಡುವ ನಾವು,ಮತ್ತೊಬ್ಬ ರಾಷ್ಟ್ರ ಕವಿ ‘ಗೋವಿಂದ ಪೈ’ ಅವರನ್ನು, ಅವರ ಊರನ್ನು ಮರೆತೇ ಬಿಟ್ಟಿದೇವೆಯೇ?

ಮಲಯಾಳಿ ‘ಪಣಿಕ್ಕರ್’ ಅವರು ಮಾಡಿದ ದ್ರೋಹಕ್ಕೆ ಬಲಿಯಾಗಿ ‘ಕಾಸರಗೋಡು’ ಕೇರಳಕ್ಕೆ ಸೇರಿತು. ನಮ್ಮನ್ನು ಸೇರಿಸಿಕೊಳ್ಳಿ ಅಂತ ಅವರು ಹೇಳುತ್ತಲೇ ಬಂದರೂ ನಾವು ಕೇಳುತ್ತ ಕೇಳುತ್ತ ಕೇಳಿಸದಂತಾಗಿ ಬಿಟ್ಟೆವು.ಈಗ ಹೇಳಿ ಹೇಳಿ ಅವರಿಗೂ ಸಾಕಗಿದೆಯೋ ಏನೋ? ಕಿಞಞಣ್ಣ ರೈ ಯವರು ಅಂದು ನೋವಿನಲ್ಲಿ ಬರೆದ ಆ ಸಾಲುಗಳನ್ನ ಅಂದಿಗೆ ಓದಿ ಒಂದೆರಡು ಹನಿ ಕಣ್ಣೀರು ಸುರಿಸಿ ಸುಮ್ಮನಾದವರಿಗೆ , ಇಲ್ಲೊಂದು  comfort zone  ಅಂತ  create  ಆದ ಮೇಲೆ ‘ಕಾಸರಗೋಡು’ ಹೋರಾಟದಲ್ಲಿ ಕೈ ಜೋಡಿಸಲು ಟೈಮು,ಮನಸ್ಸು ಎರಡು ಇರಲಿಲ್ಲ ಅನ್ನಿಸುತ್ತೆ. ಏಕೀಕರಣದ ನಂತರ ಭುಗಿಲೆದ್ದ ಅಸಮಾಧಾನಕ್ಕೆ ನೆಹರು ಪ್ರತಿಕ್ರಿಯಿಸಿ ‘೪ ಗ್ರಾಮಗಳು ಆ ಕಡೆ ಹೋಗಬಹುದು,೪ ಗ್ರಾಮಗಳು ಈ ಕಡೆ ಬರಬಹುದು.ಯಾರನ್ನೂ ನಾವೇನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಿಲ್ಲವಲ್ಲ’ ಅಂದಿದ್ದರು. ಬೆಂಕಿ ತಾಗಿದವ್ರಿಗೆ ಮಾತ್ರ ಬಿಸಿಯ ಅರಿವಾಗುವುದು. ಪಾಪ, ಅವರಿಗೆ ಇದೆಲ್ಲ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ,ಸಮಯ ಎರಡು ಇರಲಿಲ್ಲ ಬಿಡಿ.ಅವರಿಗಾದರೂ ನೋಡಲು ಇಡಿ ಭಾರತದ ಸಮಸ್ಯೆಗಳಿದ್ದವು!. ಆದರೆ ಕರ್ನಾಟಕದ ನಾಯಕರು ಏನು ನೋಡ್ತಾ ಇದ್ದಿರಬಹುದು!?

‘ಕಾಸರಗೋಡು’ ಕೇರಳಕ್ಕೆ ಸೇರಿದೆ ಅನ್ನುವುದು ಗೊತ್ತಾದಾಗ ಕಡೆ ಪಕ್ಷ ದಕ್ಷಿಣ ಕನ್ನಡ ಭಾಗದ ಜನ ಪ್ರತಿನಿಧಿಗಳು ತಮ್ಮ ಅಧಿಕಾರದಾಸೆ ಬಿಟ್ಟು ರಾಜಿನಾಮೆ ನೀಡಿ ಅಂದು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಲಿಲ್ಲ.ಈಗ ‘ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ’ ಅನ್ನುವ ಭಾಷಣಗಳು ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾದಾಗ ಬರುತ್ತಿವೆ ಅಷ್ಟೇ! ಗಡಿ ಸಮಸ್ಯೆಗಳನ್ನ ಆಯಾ ರಾಜ್ಯ ಸರ್ಕಾರಗಳೇ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರ ಹೇಳಿ ಕೈ ತೊಳೆದುಕೊಂಡಿತು. ಮಾತಾಡಬೇಕಾದವರು ಸದಾ ಕಾಲ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಎಲ್ಲ ಮರೆತು ಬಿಟ್ಟರು.

ನಮ್ಮ ರಾಜ್ಯದ ಜನ ಸೇವಕ(ನಾಯಕರಲ್ಲ!)ರನ್ನ ದೂರುವ ಮೊದಲು ನಾವುಗಳು (ಕನ್ನಡಿಗ ಮಹಾಪ್ರಭುಗಳು!) ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಬೇಡವೇ? ಇತ್ತ ‘ಕಾವೇರಿ’ದಾಗ ಅತ್ತ ಕರಾವಳಿ ಸೇರಿದಂತೆ ಹಲವೆಡೆ ಎಲ್ಲ ‘ತಣ್ಣ’ಗಿರುತ್ತದೆ.ನಾವ್ಯಾರು ಒಬ್ಬರಿಗೊಬ್ಬರು ಅಂತ ನಿಲ್ಲುವುದೇ ಇಲ್ಲ.ಅವರು ಕರೆದಾಗ ಇವರು ಹೋಗಲ್ಲ, ಇವ್ರು ಕರ್ದಾಗ ಅವ್ರು ಹೋಗಲ್ಲ ಅನ್ನೋ ತರ ಇದೆ ನಮ್ಮ ಸ್ಥಿತಿ. ನೆಲ-ಜಲದ ವಿಷಯಕ್ಕೆ  ‘ಕರ್ನಾಟಕ ಬಂದ್’ ಕರೆ ಕೊಟ್ರೆ ಹೆಚ್ಚೆಂದರೆ ೪-೫ ಜಿಲ್ಲೆಗಳು ‘ಬಂದ್’! .ಉಳಿದವರದು ‘ಹೇಯ್,ಬಿಡ್ರಿ ನಾವ್ ಯಾಕ್ ಮಾಡ್ಬೇಕು,ಅವ್ರಿಗೆ ಮಾಡೋಕೆನ್ ಕೆಲ್ಸ ಇಲ್ಲ’ ಅನ್ನೋ ಧೋರಣೆ!, ಬೆಂಬಲ ಕೊಡದೆ ಸುಮ್ನೆ ಇದ್ದ ನಾವ್ ಮಹಾನ್ ಬುದ್ದಿವಂತರು ಅನ್ನೋ ಮನೋಭಾವ.ತಮ್ಮ ಕಲೆಕ್ಷನ್ ಕಡಿಮೆಯಾದಾಗ ಬೀದಿಗಿಳಿಯುವ ಚಿತ್ರರಂಗಕ್ಕೆ ಆಗ ಅಸ್ತ್ರಗಳಾಗಿ ಸಿಗುವುದು ‘ಮಹಾಜನ್ ವರದಿ,ಸರೋಜಿನಿ ಮಹೀಷಿ ವರದಿ’ಗಳು.ಅವರ ಸಮಸ್ಯೆ ಮುಗಿತು ಅಂದ್ರೆ ಅಲ್ಲಿಗೆ ಮತ್ತೆ ಎಲ್ಲ ಶಾಂತಿ ಶಾಂತಿ!.

ನಮ್ಮ ರಾಜ್ಯದಲ್ಲಿರೋ ಕೊಡಗು,ಹೈದರಾಬಾದ್ ಕರ್ನಾಟಕದ ಕೆಲವರೇ ಪ್ರತ್ಯೇಕ ರಾಜ್ಯದ ಬೇಡಿಕೆಯಿಡುತಿದ್ದಾರೆ, ಮತ್ತಿನ್ಯಾಕೆ ಬೇರೆಯವರ ಹತ್ರ ಇರೋ ಭಾಗ ಕೇಳೋದು ಅಂತಾನು ನಮಗೆ ಅನ್ನಿಸಬಹುದು.ಹಾಸನದಿಂದ ಕೊಡಗಿನ ಕಡೆ ಹೊರಟರೆ ಹಾಸನ ಮುಗಿಯುವವರೆಗೆ ರಸ್ತೆ ಚೆನ್ನಾಗಿದೆ. ಕೊಡಗು ಪ್ರವೇಶಿಸುತ್ತಿದ್ದಂತೆ ಅಲ್ಲೊಂದು ಫಲಕವಿದೆ ‘ಕೊಡಗಿನ ಗಡಿ ಪ್ರಾರಂಭ’ ಅಂತ. ಆ ದಾರಿಯಲಿ ಹೋಗಿ ಬಂದ ಯಾರೋ ಪುಣ್ಯಾತ್ಮ ಅದನ್ನ ‘ಕೊಡಗಿನ ‘ಗುಂಡಿ’ ಪ್ರಾರಂಭ’ ಅಂತ ಬದಲಾಯಿಸಿದ್ದಾನೆ!.ಕಳೆದ ವರ್ಷ ಕೊಡಗಿಗೆ ಹೋದಾಗ ಇದನ್ನ ನೋಡಿದ್ದೇ, ಅದಕ್ಕಿಂತ ಮೊದಲು ಹೋಗಿದ್ದಾಗಲು  ನೋಡಿದ್ದೇ.ಈಗ ಆ ‘ಗುಂಡಿ-ಗಡಿ’ಯಾಗಿ ಪರಿವರ್ತನೆಯಾಗಿದೆಯೋ ಇಲ್ವೋ ಗೊತ್ತಿಲ್ಲ! ಬಹುಷಃ ಈಗಲೂ ಅದು ಗುಂಡಿಯೇ ಆಗಿದ್ದರೆ ಅವರು ಪ್ರತ್ಯೇಕ ‘ಗಡಿ’ ಕೇಳದೆ ಇನ್ನೇನು ತಾನೇ ಮಾಡಿಯಾರು ಹೇಳಿ?

ಮಹಾಜನ್ ಆಯೋಗ ಮಾಡುವಂತೆ ಪಟ್ಟು ಹಿಡಿದ ಮಹಾರಾಷ್ಟ್ರದವರು ವರದಿ ವ್ಯತಿರಿಕ್ತವಾಗಿ ಬಂದಿದ್ದರಿಂದ ಅದನ್ನ ಒಪ್ಪಲಿಲ್ಲ. ಒಂದು ವೇಳೆ ವರದಿಯೇನಾದರು ‘ಬೆಳಗಾವಿ’ ಅವರಿಗೆ ಸೇರಬೇಕು ಅಂದಿದ್ದಾರೆ ಸುಮ್ಮನಿರುತಿದ್ದರಾ? ಅವರು ಸುಮ್ಮನಾಗಿದ್ದರೂ ನಾವಾಗೆ ಮೈ ಮೇಲೆ ಬಿದ್ದು ತಗೊಂಡ್ ಹೋಗ್ರಪ್ಪ ಬೆಳಗಾವಿನ ಅಂತ ಕೊಡ್ತಿದ್ವೋ ಏನೋ?.ಬೆಳಗಾವಿ ಅವರಿಗೆ ಸೇರಿದ್ದಲ್ಲ ಅಂತ ಗೊತ್ತಿದ್ದರೂ,ಅದೇ ವಿಷಯವನ್ನ ಸಾಧ್ಯವಾದಗಾಲೆಲ್ಲ ಕೆದಕುವ ಮಹಾರಾಷ್ಟ್ರದ ರಾಜಕಾರಣಿಗಳಂತೆ ನಮ್ಮವರು atleast ಕಾಸರಗೋಡಿನ ವಿಷಯವನ್ನ ಜೀವಂತವಾಗಿಡಲು ಪ್ರಯತ್ನಿಸುತ್ತಿಲ್ಲ.ಬದಲಾಗಿ ‘ಸೀಮಾ ಪರಿಷತ್’ ನಂತಹ ಶಾಂತಿ ಕದಡುವ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾರೆ.ಹೆಚ್ಚೆಂದರೆ ನನ್ನಂತವರು ಕುಳಿತು ಅದರ ಬಗ್ಗೆ ಬರೆಯುತ್ತೇವೆ ಅಷ್ಟೇ, ಆದರೆ ಮೊನ್ನೆ ಅಲ್ಲಿ ಕ.ರ.ವೇ ಮಾಡಿದ ಹೋರಾಟಕ್ಕೆ ಅಭಿನಂದನೆ ಹೇಳಲೇಬೇಕು.ಇಂತ ಕೆಲವು ಕನ್ನಡ ಪರ ಸಂಘಟನೆಗಳಿರುವುದರಿಂದಲೇ ಬೆಳಗಾವಿಯಲ್ಲಿ ಎಂ.ಇ.ಎಸ್ ಆಟ ನಡೆಯುತ್ತಿಲ್ಲ.ಸರ್ಕಾರವನ್ನೇ ನಂಬಿ ಕೂತಿದ್ದರೆ ಬೆಳಗಾವಿಯು ಕೈ ಬಿಟ್ಟು ಹೋಗುತಿತ್ತೋ ಏನೋ? ಇದೆ ಹೋರಾಟದ ಸ್ಪೂರ್ತಿಯನ್ನ ಕಾಸರಗೋಡಿನ ವಿಲೀನದ ವಿಷಯದಲ್ಲೂ ತೋರಿಸಬಹುದಲ್ವಾ?

ಮಹಾಜನ್ ವರದಿಯನ್ನ ಜಾರಿಗೆ ತರಲು ಸಾಧ್ಯವಿಲ್ಲ ಅನ್ನೋದು  ಮಹಾರಾಷ್ಟ್ರ ಹಾಗು ಕೇರಳ ಸರ್ಕಾಗಳ ವಾದ.ಜಾರಿಯಾಗಲಿ ಅನ್ನೋದು ಕರ್ನಾಟಕದ ವಾದ.ಇದು ಮುಗಿಯದ ಕತೆ.ಅದರ ಬದಲು ಕೇಂದ್ರ ಸರ್ಕಾರವೇಕೆ ಬೇರೆ ಸೂತ್ರ ಹುಡುಕುತ್ತಿಲ್ಲ? ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತ ನಿರ್ಧರಿಸಿಬೇಕಾದವ್ರು ಅಲ್ಲಿ ಜೀವನ ನಡೆಸುತ್ತಿರುವ ಜನಗಳು.ಸಮಸ್ಯೆ ಪರಿಹರಿಸ ಬೇಕಿರುವ ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕಿದೆ.ಬಹುಷಃ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿದೆ. ಇದು ಸಾಧ್ಯವಿಲ್ಲ ವರದಿಯೇ ಅಂತಿಮ ಅಂತ ಕುಳಿತರೆ ಸಮಸ್ಯೆ ಬಗೆಹರಿಯುವುದೇ? ಬಗೆ ಹರಿದರೆ ಸಂತೋಷ ಇಲ್ಲದಿದ್ದರೆ,ಸ್ವಲ್ಪ ದಿನಗಳ ನಂತರ ಎಲ್ಲರ ನೆನಪಿನಿಂದ ಈ ವಿಷಯ ಮಾಸಿಯೂ ಹೋಗಬಹುದು (ಈಗಾಗಲೇ ಹೋಗಿಬಿಟ್ಟಿದೆ ಬಿಡಿ). ‘ಸ್ವಂತ ಮನೆ’ಯಿದ್ದುಕೊಂಡು ‘ಬಾಡಿಗೆ ಮನೆ’ಯಲ್ಲಿರುವ ನೋವು ಅವರಿಗೆ ಶಾಶ್ವತ!!

ಆಮೇಲೆ,

‘ಉದಯವಾಯಿತು ಚೆಲುವ ಕನ್ನಡ ನಾಡು’ ಅಂತ ಹಾಡಿಕೊಂಡು ಕಾಲ ತಳ್ಳೋಣ…

Advertisements

8 ಟಿಪ್ಪಣಿಗಳು »

 1. Nanoo Kasaragodinava.. bavaligala hage.. Atta aakashakkoo illa itta bhoomigoo illa…

  Comment by ISHWARA BHAT K — 19/03/2010 @ 5:08 ಫೂರ್ವಾಹ್ನ | ಉತ್ತರ

  • ಹೌದು ಭಟ್ರೇ ಅರ್ಥವಾಗುತ್ತದೆ 😦
   ಬಹುಷಃ ಕಾಸರಗೋಡಿನವರು ಗಟ್ಟಿಯಾಗಿ ಕೇಳದಿದ್ದರೆ ಇದು ಮುಗಿದ ಕಥೆಯಾಗಿಬಿಡುತ್ತದೆ ಅಷ್ಟೇ!

   Comment by rakeshsshetty — 19/03/2010 @ 2:16 ಅಪರಾಹ್ನ | ಉತ್ತರ

 2. ಶೆಟ್ರೇ, ನಮಸ್ಕಾರಗಳು. ನಿಮ್ಮ ಲೇಖನದಲ್ಲಿನ ರೊಚ್ಚು ಪ್ರಾಮಾಣಿಕವಾದದ್ದು! ಕನ್ನಡದ ಬುಧ್ಧಿಜೀವಿಗಳಿಗಿ೦ತ ಹೆಚ್ಚಿನ ಕನ್ನಡ ಪ್ರೇಮ ಸಾಮಾನ್ಯ ಕನ್ನಡಿಗರಲ್ಲಿದೆ! ಆದರೆ ಒಬ್ಬ ಧೀಮ೦ತ ಹಾಗೂ ಸಹೃದಯಿ ನಾಯಕನೊಬ್ಬನ ಅವಶ್ಯಕತೆ ಕನ್ನಡನಾಡಿಗಿದೆ! ಕಾಸರಗೋಡಿನ ಜನತೆಯ ಬವಣೆ ತೀರಾ ಹೇಳಲಾಗದ೦ಥಹದ್ದು! ನಾನು ನನ್ನ ಮಾವನ ಮನೆಗೆ ಹೋದಾಗ ಅಲ್ಲಿಯ ಕೆಲವಾರು ಜನರನ್ನು ಈ ಬಗ್ಗೆ ಮಾತನಾಡಿಸಿದಾಗ ಅವರು ಹೇಳುವುದು ಇಷ್ಟೇ! ನಿಮ್ಮ ಕನ್ನಡ ನಾಯಕರಿಗೇ ಕಾಸರಗೋಡು ಕರ್ನಾಟಕಕ್ಕೆ ಸೇರುವುದು ಬೇಕಿಲ್ಲ!
  ಒಬ್ಬ ಅಧ್ಬುತ ಬರಹಗಾರ ನಿಮ್ಮೊಳಗಿದ್ದಾನೆ!ಅವನನ್ನು ನಿಯಮಿತವಾಗಿ ಹೊರಗೆ ಬರಲು ಬಿಡಿ!ಮು೦ದುವರಿಸಿ!
  ನಮಸ್ಕಾರಗಳು.

  Comment by ksraghavendranavada — 22/05/2010 @ 7:56 ಫೂರ್ವಾಹ್ನ | ಉತ್ತರ

  • ನನ್ನೀ ನಾವಡರೆ,
   ನೀವು ಹೇಳಿದ್ದು ನಿಜ,ಸಹೃದಯಿ ನಾಯಕನೊಬ್ಬನ ಅವಶ್ಯಕತೆ ಖಂಡಿತ ನಮಗಿದೆ.ಕಾಸರಗೋಡು ಇನ್ನ ಮತ್ತೆ ಮರಳಿ ನಮಗೆ ಸಿಗುವುದಿಲ್ಲ ಅನ್ನಿಸುತ್ತೆ,ಸದ್ಯ ಮಲಯಾಳಿಗಳ ಆರ್ಭಟಕ್ಕೆ ಸಿಕ್ಕಿ ಮಂಗಳೂರು ಕೈ ತಪ್ಪದಿದ್ದರೆ ಸಾಕು!
   ಪ್ರೋತ್ಸಾಹ ಹೀಗೆ ಇರಲಿ,ಧನ್ಯವಾದಗಳು 🙂

   Comment by rakeshsshetty — 24/05/2010 @ 5:30 ಅಪರಾಹ್ನ | ಉತ್ತರ

 3. Helloo rakesh Sheety. kasragodu belongs to kerala. but kasargodu people speaks tulu not a kannada. and tulu is complety from malayalm u can find 70% malayam. and only 10% kannada,tamil in tulu, even no kannada in mangalore city. i stayed 4 yers in manglore. even malayli culutre and tulu culutre 100% similar. even tulu speaking people never consider themself as kanndigas .so hw u can say kasaragodu part of karantaka, they did right decison. they joined kasargodu to kerala.

  Comment by Yash — 30/08/2011 @ 11:10 ಫೂರ್ವಾಹ್ನ | ಉತ್ತರ

  • Yash,

   ನಾನು ಒಬ್ಬ ತುಳುವ ಸ್ವಾಮಿ.ಭಾಷೆಗಳಲ್ಲಿ ಬೇರೋಂದು ಭಾಷೆಯ ಪದಗಳು ಬರುವುದೆಲ್ಲ ಸಾಮಾನ್ಯ.ಇನ್ನ ತುಳುವಿನಲ್ಲಿ ೭೦% ಮಲಯಾಳಂ ಪದಗಳಿವೆ ಅನ್ನುವುದು ಶುದ್ದ ಸುಳ್ಳು.ಇದನ್ನ ಪ್ರೂವ್ ಮಾಡಬಲ್ಲಿರಾ? ಇನ್ನ ಕಾಸರಗೋಡಿನಲ್ಲಿ ಕನ್ನಡವಿಲ್ಲ ಅಂತ ನೀವು ಹೇಳುವ ಮೊದಲ್ಲು ನಿಮಗೆ ಕರ್ನಾಟಕ ಏಕೀಕರಣ ಇತಿಹಾಸ ತಿಳಿದಿದೆಯಾ ಅನ್ನುವುದು ಪ್ರಶ್ನೆ? ಹಾಗೆಯೇ ಕಾಸರಗೋಡಿನ ಜನ ಕೇರಳಕ್ಕೆ ಹೋಗಲಿಲ್ಲ ಅವರನ್ನ ಮೋಸದಿಂದ ಸೇರಿಸಲಾಯಿತು ಅನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲ. ಇಂತ ವಿಷಯಗಳ ಬಗ್ಗೆ ಜಡ್ಜ್ ಮೆಂಟ್ ಕೊಡುವ ಮೊದಲು ಇತಿಹಾಸ ಹಾಗೆ ಪ್ರಚಲಿತ ಸುದ್ದಿಗಳನ್ನ ತಿಳಿದು ಮಾತನಾಡಿ.
   ಕಾಸರಗೋಡಿನ ಕನ್ನಡ ಪವರ್ ಬಗ್ಗೆ ಒಂದು ಪುಟ್ಟ ವಿಡಿಯೋ ತುಣುಕು ಇಲ್ಲಿದೆ

   Comment by ರಾಕೇಶ್ ಶೆಟ್ಟಿ — 11/09/2011 @ 12:56 ಅಪರಾಹ್ನ | ಉತ್ತರ

 4. ಯಶ್ ಎಂಬವರ ಕಮೆಂಟ್ ಓದಿ ತುಂಬಾ ಬೇಸರವಾಯಿತು. ತಮ್ಮತನವನ್ನೇ ಮರೆತುಬಿಡುವಷ್ಟು ಮೈಮರೆವು ಕೆಲವರನ್ನು ಆವರಿಸಿಬಿಟ್ಟಿದೆ. ಮಲೆಯಾಳದಿಂದಲೇ ತುಳು ಹುಟ್ಟಿದೆಯೆಂದು ಭ್ರಮಿಸಿಬಿಟ್ಟಿದ್ದಾರೆ. ನೀವು ಹೇಳಿದ ಮಲೆಯಾಳಿಗಳ ಆರ್ಭಟದ ಫಲಿತಾಂಶವೇ ಇದು.

  Comment by KP Bolumbu — 30/07/2013 @ 5:29 ಅಪರಾಹ್ನ | ಉತ್ತರ

  • ಹಾಗೆ ಹೇಳುವವರಿಗೆ ಒಂದು ವಿಷಯ ಗೊತ್ತಿಲ್ಲ. ಕಾಸರಗೋಡಿನ ಸ್ಥಳೀಯ ಮಲೆಯಾಳ ಸಂಸ್ಕೃತಿ ತುಳು ಭಾಷಿಕ ಸಂಸ್ಕೃತಿಯಿಂದ ಪ್ರಭಾವಗೊಂಡಿರುವಂಥದ್ದು. ಉದಾಹರಣೆಗೆ ಕೇರಳಕ್ಕೆ ಸೇರುವ ಮುನ್ನ ಕಾಸರಗೋಡಿನಲ್ಲಿ ಓಣಂ ಆಚರಣೆ ಇರಲಿಲ್ಲ. ಕಾಸರಗೋಡಿನ ಮಲೆಯಾಳಿಗಳ ದೀಪಾವಳಿ ಆಚರಣೆ ತುಳುವರ ದೀಪಾವಳಿ ಆಚರಣೆಗೆ ತುಂಬ ಸನಿಹವಾದುದು. ಕಾಸರಗೋಡಿನಲ್ಲಲ್ಲದೆ ಬೇರೆ ಕಡೆ ಮಲೆಯಾಳಿಗಳಿಗೆ ದೀಪಾವಳಿಯ ಆಚರಣೆಯೇ ಇಲ್ಲ.

   Comment by KP Bolumbu — 30/07/2013 @ 5:43 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

%d bloggers like this: