‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.

ಅವರು ಹುತಾತ್ಮರಾಗಿ ಇಂದಿಗೆ ೭೯ ವರ್ಷಗಳಾಯಿತು.ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ  ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್.ಚಂದ್ರ ಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು.ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ.ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ,ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ ಇವೆರಡು ಘಟನೆಗಳು ಭಗತ್ ಸಿಂಗ್ನ  ಮುಂದಿನ ಜೀವನ ದಿಕ್ಕನ್ನು ಬದಲಾಯಿಸಿದವು ಅನ್ನಬಹುದೇನೋ?

ಆ ನಂತರ ಅವನು ಆರಿಸಿಕೊಂಡಿದ್ದು ಕ್ರಾಂತಿ ಮಾರ್ಗವನ್ನ.ಕಾಲೇಜಿನ ದಿನಗಳಲ್ಲೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರವರ ‘ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್ ಸದಸ್ಯನಾಗಿ ಚಳುವಳಿಗೆ ಧುಮುಕಿದ.ಕಾಕೋರಿ ಪ್ರಕರಣದ ನಂತರ ಮೂಂಚೂಣಿ ಕ್ರಾಂತಿಕಾರಿ ನಾಯಕರಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರನ್ನ ಬ್ರಿಟಿಶ್ ಸರ್ಕಾರ ಗಲ್ಲಿಗೇರಿಸಿತು.ಭಗತ್ ಸಿಂಗ್ಗೆ ಗುರುವಿನಂತಿದ್ದ ಮತ್ತೊಬ್ಬ ಮಹಾನ್ ಹೋರಾಟಗಾರ ಚಂದ್ರ ಶೇಖರ್ ಆಜಾದ್ ಭೂಗತರಾಗಬೇಕಾಯಿತು.ಈ ಸಂಧರ್ಭದಲ್ಲಿ ಕ್ರಾಂತಿಕಾರಿಗಳ ನಾಯಕನಾಗಿ ಹೊಮ್ಮಿದವನು ಭಗತ್ ಸಿಂಗ್. ನೌಜವಾನ್ ಭಾರತ ಸಭಾದ ಸದಸ್ಯನು ಆಗಿದ್ದ ಭಗತ್, ದೆಹಲಿಯಲ್ಲಿ ಕರೆದಿದ್ದ ಕ್ರಾಂತಿಕಾರಿಗಳ ಸಭೆಯಲ್ಲಿ ನಮ್ಮ ಗುರಿ ಸ್ವಾತಂತ್ರ್ಯಗಳಿಸುವುದಷ್ಟೇ ಅಲ್ಲ.ಸ್ವಾತಂತ್ರ್ಯ ನಂತರದ ಸಮಗ್ರ ಭಾರತ ಹೇಗಿರಬೇಕು ಎಂಬ ಚಿತ್ರಣವು ಇತ್ತು ಅವನಿಗಿತ್ತು.ಇಪ್ಪತ್ತರ ಆಸು ಪಾಸಿನ ಹುಡುಗ ಆ ಮಟ್ಟಕ್ಕೆ ಯೋಚಿಸಬಲ್ಲವನಾಗಿದ್ದ.

‘ಸೈಮನ್ ಕಮಿಷನ್’ ವಿರುದ್ಧ ಗುಡುಗಿದ ಲಾಲ ಲಜಪತ ರಾಯ್ ಅವರನ್ನ ಪೊಲೀಸರು ಹೊಡೆದು ಕೊಂದಾಗ,ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದುಕೊಳ್ಳಲು ಶಪತ ಮಾಡಿದರು ಮತ್ತು ಅದರಂತೆ ಕಾರ್ಯ ರೂಪಕ್ಕೆ ತರಲು ಭಗತ್ನೊಂದಿಗೆ ಕೈ ಜೋಡಿಸಿದವರು ರಾಜಗುರು,ಸುಖದೇವ್ ಮತ್ತು ಜೈ ಗೋಪಾಲ್. ಅವರು ಬಲಿತೆಗೆದು ಕೊಳ್ಳಬೇಕಿದ್ದಿದ್ದು  ಪೋಲಿಸ್ ಮುಖ್ಯಸ್ಥ ಸ್ಕಾಟ್ ಅನ್ನು,ಆದರೆ ಜೈ ಗೋಪಾಲ್ ಇಶಾರೆ ಮಾಡುವಾಗ ತಪ್ಪಿ ತೋರಿಸಿದ್ದು ಅವನ ಕೆಳಗಿನ ಅಧಿಕಾರಿ ಸ್ಯಾಂಡರ್ಸ್ನನ್ನ.ಅವನನ್ನು ಹತ್ಯೆಗೈದು ಅಲ್ಲಿಂದ ತಪ್ಪಿಸಿಕೊಂಡ ಭಗತ್ ಮತ್ತು ಸಂಗಡಿಗರು ವೇಷ ಬದಲಿಸಿ ಕೆಲಕಾಲ ದೂರವಿದ್ದರು.

ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ ಅವನು ಹೇಳಿದ್ದು “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು”.ಹಾಗೆ ಭಗತ್ನೊಂದಿಗೆ ಅಲ್ಲಿ ಶರಣಾದ ಮತ್ತೊಬ್ಬ ಕ್ರಾಂತಿಕಾರಿ ಭಟುಕೇಶ್ವರ್ ದತ್ತ.ಆ ನಂತರ ಬ್ರಿಟಿಶ್ ಸರ್ಕಾರಕ್ಕೆ  ಸ್ಯಾನ್ದರ್ಸ್ನ ಹತ್ಯೆಯ ರೂವಾರಿ ಭಗತ್ ಅನ್ನುವುದನ್ನು ತಿಳಿಯಿತು ಉಳಿದ ಎಲ್ಲ ಸಂಗಡಿಗರ ಬಂಧನವೂ ಆಯಿತು.

ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ಎಲ್ಲ ಕ್ರಾಂತಿಕಾರಿಗಳು ಭಗತ್ ನೇತೃತ್ವದಲ್ಲಿ ಉಪವಾಸಕ್ಕಿಳಿದರು.ಆಗ ಅವರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡುತಿದ್ದ ಆಗಿನ ಮಹಾನ್ (?) ನಾಯಕರ ಮಧ್ಯೆ ಅವರೊಬ್ಬ ಮಹಮ್ಮದ್ ಅಲಿ ಜಿನ್ನಾ ಮಾತ್ರ ಬಹಿರಂಗವಾಗೇ “ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” ಅಂದಿದ್ದರು.

ಎಲ್ಲ ಆರೋಪಗಳು ಸಾಬಿತಾದ ಮೇಲೆ ಭಗತ್ ಸಿಂಗ್,ರಾಜ್ ಗುರು,ಸುಖ್ದೇವ್ ಅವರಿಗೆ ೧೯೩೧ರ ಮಾರ್ಚ್ ೨೩ರನ್ದು ಮರಣದಂಡನೆ ಶಿಕ್ಷೆ ವಿಧಿಸಲಾಯಿತು.ಇದನ್ನ ವಿರೋಧಿಸಿ ಹಲ ಹೋರಾಟಗಳು,ಮನವಿ ಪತ್ರಗಳು,ಸಹಿ ಸಂಗ್ರಹಣೆ ಎಲ್ಲ ನಡೆದವು ಆದರೆ ಯಾವುದು ಪ್ರಯೋಜನಕ್ಕೆ ಬರಲಿಲ್ಲ.ಭಗತ್ ಸಿಂಗ್ ಅವರ ತಂದೆ ಕಿಶನ್ ಸಿಂಗ್ ಅವರು ಬ್ರಿಟಿಷರಿಗೆ ಶಿಕ್ಷೆಯನ್ನ ರದ್ದು ಪಡಿಸುವಂತೆ ಮನವಿ ಮಾಡಿದಾಗ ಖುದ್ದು ಭಗತ್ ಸಿಂಗ್  “ನಾನು ಬದುಕುವುದಕ್ಕಿಂತ ಬಲಿದಾನ ಮಾಡುವುದರಿಂದಲೇ ಬ್ರಿಟಿಶ್ ಸಾಮ್ರಾಜ್ಯದ ಪತನವಾಗುತ್ತದೆ” ಅಂದವನೇ ಆ ಪತ್ರವ ಹಿಂಪಡೆಯುವಂತೆ ಮಾಡಿದ್ದ.

ಇನ್ನು ಭಗತ್ ಹಾಗು ಸಂಗಡಿಗರ ಶಿಕ್ಷೆಯನ್ನ,ಗಾಂಧೀಜಿಯವರು ‘ಗಾಂಧೀ-ಇರ್ವಿನ್’ ಒಪ್ಪಂದದ ಸಮಯದಲ್ಲಿ ಪಟ್ಟು ಹಿಡಿದು ಕುಳಿತಿದ್ದರೆ ತಪ್ಪಿಸಬಹುದಿತ್ತು ಅನ್ನುವ ಮಾತುಗಳಿವೆ.ಆ ಬಗ್ಗೆ ಹಲವು ವಿವಾದಗಳು ಸಮರ್ಥನೆಗಳು ಇವೆ.ಕ್ರಾಂತಿಕಾರಿಗಳ ಪರವಾಗಿರುವವರು ‘ಗಾಂಧೀಜಿ ಅಂತ ಪ್ರಯತ್ನವನ್ನೇ ಮಾಡಲಿಲ್ಲ’ ಅಂದರೆ, ಗಾಂಧೀ ಪರವಾದವರು “ಗಾಂಧೀಜಿ ಸರ್ವ ಪ್ರಯತ್ನವನ್ನು ಮಾಡಿದ್ದರು ಆದರೆ ಸಫಲರಾಗಲಿಲ್ಲ” ಅನ್ನುತ್ತಾರೆ. ಇವೆಲ್ಲದರ ಮಧ್ಯೆ ಕಾಡುವ ವಿಷಯವೆಂದರೆ ಶಿಕ್ಷೆಗೆ ಎರಡು  ದಿನ ಮೊದಲು ಸುಖ್ ದೇವ್ ಗಾಂಧೀಜಿಗೆ ಬರೆದ ಅನ್ನುವ ಪತ್ರ(ಅದು ಅವರಿಗೆ ತಲುಪಿದ್ದು ಅವನ ಮರಣದ ನಂತರ).ಪತ್ರದ ಒಕ್ಕಣೆ “ಅವರಲ್ಲಿ ಒಬ್ಬ”.  ಆ ಪತ್ರದಲ್ಲಿ ಸುಖ್ ದೇವ್  ಹೀಗೆ ಬರೆಯುತ್ತಾನೆ

“ನೀವು ನಿಮ್ಮ ಚಳುವಳಿ ನಿಲ್ಲಿಸಿದಿರಿ.ಹಾಗಾಗಿ ನಿಮ್ಮವರೆಲ್ಲ ಬಿಡುಗಡೆಯಾಗಿದ್ದಾರೆ.ಆದರೆ ನಾವು ಕ್ರಾಂತಿಕಾರಿಗಳು ಏನು ಮಾಡಬೇಕು?ನಮ್ಮ ಗತಿ ಏನು?೧೯೧೫ ರಿಂದಲೂ ಗದರ್ ಪಾರ್ಟಿಯ ಜನ ಜೈಲಿನಲ್ಲಿ ಕೊಳೆಯುತಿದ್ದಾರೆ.ಬಬ್ಬರ್ ಅಖಾಲಿ,ಕಾಕೋರಿ,ಮಾಚುವ ಬಜಾರ್,ಲಾಹೋರ್ ಪೀತೂರಿ ಕೇಸಿನಲ್ಲಿ ಸಿಕ್ಕಿರುವ ಕ್ರಾಂತಿಕಾರಿಗಳೆಲ್ಲ ಕಂಬಿ ಎಣಿಸುತಿದ್ದಾರೆ.ಅವುಗಳೆಲ್ಲದರ ವಿಚಾರಣೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ.ಎಷ್ಟೋ ಜನ ಕ್ರಾಂತಿಕಾರಿಗಳ ಪತ್ತೆಯೇ ಇಲ್ಲ.ಅವರೆಲ್ಲ ಏನಾದರು ಯಾರಿಗೂ ಗೊತ್ತಿಲ್ಲ.ಹಾಗೆ ನಾಪತ್ತೆಯಾದವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ.ಜೈಲಿನಲ್ಲಿರುವ ಅರ್ಧದಷ್ಟು ಮಂದಿಗೆ ಮರಣದಂಡನೆಯಾಗುವುದು ಖಾತ್ರಿ.ಈ ಬಗ್ಗೆ ನಿಮಗೆ ಯಾಕೆ ಆಸಕ್ತಿ ಇಲ್ಲ”.

ಭಗತ್ ಸಿಂಗ್,ಸುಖ ದೇವ್.ರಾಜ್ ಗುರು ಅವರ ಬಲಿದಾನ ಭಾರತೀಯರಲ್ಲಿ ಹೋರಾಟ ಕಿಚ್ಚು ಹಚ್ಚುವಲ್ಲಿ ಸಫಲವಾಯಿತು.ಹಾಗೆ ಅವರು ಹಚ್ಚಿದ ಕ್ರಾಂತಿ ಜ್ಯೋತಿಗೆ ನಿರ್ಣಾಯಕ ತಿರುವು ಕೊಟ್ಟವರು ಸಮರ ಸೇನಾನಿ ಸುಭಾಷ್ ಚಂದ್ರ ಬೋಸ್.೪೭ರಲ್ಲಿ ಸ್ವಾತಂತ್ರ್ಯವೇನೋ ಸಿಕ್ಕಿತು.ಆದರೆ ನಂತರೆ ನಮ್ಮ ಇತಿಹಾಸದ ಪುಸ್ತಕದಲ್ಲಿ ಕ್ರಾಂತಿಕಾರಿಗಳೆಲ್ಲ ಮೂಲೆ ಸೇರಿಬಿಟ್ಟರಲ್ಲ.ಭಗತ್ ಸಿಂಗ್,ರಾಜ್ ಗುರು,ಸುಖ್ ದೇವ್,ಚಂದ್ರ ಶೇಖರ್ ಆಜಾದ್,ಲಾಲ ಹರದಯಾಳ್,ಖುದೀರಾಂ ಬೋಸ್,ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ ಖಾನ್,ಅರ್ಜುನ್ ಸಿಂಗ್,ಮೋಹನ್ ಸಿಂಗ್,ರಾಸ್ ಬಿಹಾರಿ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಬಗ್ಗೆ ಹೆಚ್ಚೆಂದರೆ ಒಂದೆರಡು ಸಾಲುಗಳಿದ್ದವು ಅಷ್ಟೇ.ಇದ್ದುದ್ದರಲ್ಲಿ ಸ್ವಲ್ಪ ಕಾಣಿಸಿಕೊಂಡವರು ಸುಭಾಷ್ ಮಾತ್ರ.
ಸೇರಿಸಿದಿದ್ದರೆ ಪರವಾಗಿಲ್ಲ ಆದರೆ, ೨೦೦೬-೦೭ ರ ಸುಮಾರಿನಲ್ಲಿ ಮೊಬೈಲ್ಗಳಿಗೆ ಒಂದು ಸಂದೇಶ ಬರುತಿತ್ತು ‘ಭಗತ್ ಸಿಂಗ್ ನನ್ನು ಕ್ರಾಂತಿಕಾರಿ ಉಗ್ರಗಾಮಿ ಎಂದು ಕೇಂದ್ರ ಸರ್ಕಾರದ ಪುಸ್ತಕದಲ್ಲಿ (ಬಹುಷಃ ಯು.ಪಿ.ಎಸ್.ಸಿನಲ್ಲಿರಬೇಕು) ಬರೆಯಲಾಗಿದೆ.ಇದರ ವಿರುದ್ಧ ಧ್ವನಿಯೆತ್ತಿ ಇದನ್ನ ಎಲ್ಲರಿಗೂ ತಿಳಿಸಿ” ಅಂತ.ಆ ಸಂದೇಶವನ್ನ ಕಳಿಸಿದರೆ ಹಲವಾರು ಗೆಳೆಯರು ನಕ್ಕಿದ್ದರು.ಅವರಿಗೆ ಅದೊಂದು ದೊಡ್ಡ ವಿಷಯವೂ ಆಗಿರಲಿಲ್ಲ.ತನ್ನ ಮಾತೃ ಭೂಮಿಯ ಜನರೇ ಹೀಗೆ ಮುಂದೊಂದು ದಿನ ನನ್ನನ್ನು ಉಗ್ರಗಾಮಿ ಎಂದು ಕರೆದಾರು ಅನ್ನೋ ವಿಷಯ ಅವನಿಗೆ ಮೊದಲೇ ತಿಳಿದಿದ್ದರೆ, ಅವನು ನೇಣುಗಂಬವನ್ನ ಏರುತ್ತಲೇ ಇರಲಿಲ್ಲವೇನೋ!?

मरके कैसे जीते है
इस दुनिया को बतलाने
तेरे लाल चले है माहे
अब तेरी लाज बचाने

(ಸತ್ತು ಬದುಕುವುದೇ ಹೇಗೆಂದು
ತೋರಿಸಲು ಹೊರಟೆವು
ನಿನ್ನ ಮಕ್ಕಳು,ತಾಯಿ
ನಿನ್ನ ಮಾನ ಉಳಿಸಲು ಇಂದು)

ಎಂದು ಹಾಡುತ್ತ ಹೊರಟವನು ‘ಸತ್ತು ಬದುಕುವುದು ಹೇಗೆ ಅನ್ನುವುದನ್ನ ಜಗತ್ತಿಗೆ ಹೇಳಿಕೊಟ್ಟು ಹೋದ.’

ಆ ಅಮರ ಸೇನಾನಿಗಳ ನೆನಪಿಗೆ ನನ್ನ ನುಡಿ ನಮನ.

ಇಂಕ್ವಿಲಾಬ್ ಜಿನ್ದಾಬಾದ್.

(ಚಿತ್ರ ಕೃಪೆ :www.desicomments.ಕಂ)

5 thoughts on “‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

Add yours

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

<span>%d</span> bloggers like this: