ಇದು ಕನ್ನಡಕ್ಕಾದ ಅವಮಾನವಲ್ಲವೇ?

ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ  ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್  ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!

ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?

Continue reading “ಇದು ಕನ್ನಡಕ್ಕಾದ ಅವಮಾನವಲ್ಲವೇ?”

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು.

ಗಾಂಧೀಜಿ,ಸಾವರ್ಕರ್,ಸುಭಾಷ್,ಅಂಬೇಡ್ಕರ್,ನೆಹರೂ ಸೇರಿದಂತೆ ಆಗಿನ ಎಲ್ಲ ಮೊದಲ ಸಾಲಿನ ನಾಯಕರು ಈ    ವಿಷಯದಲ್ಲಿ ಎಡವಿದವರೇ.ಸ್ವಾತಂತ್ರ್ಯ ಪೂರ್ವದಲ್ಲೇ ನಡೆದ ಇಂತ ಹೋರಾಟದಿಂದಾದರೂ ಆಗಿನ ನಾಯಕರುಗಳು ಈ ದೇಶದ ಭಾಷ ವೈವಿಧ್ಯತೆಯನ್ನ ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು, ಆದರೆ ಗಮನಿಸಲಿಲ್ಲ.ಸ್ವಾತಂತ್ರ್ಯ ಬಂದ ಮೇಲೆ ಮತ್ತೊಂದು ಎಡವಟ್ಟು ಮಾಡಿದ್ರು.ಅದು ೧೫ ವರ್ಷಗಳ ನಂತರ ಹಿಂದಿಯೊಂದೇ ಭಾರತದ ಆಡಳಿತಾತ್ಮಕ ಭಾಷೆಯಾಗುತ್ತದೆ ಅನ್ನೋ ಅಂಶವನ್ನ ಸಂವಿಧಾನದಲ್ಲಿ ಸೇರಿಸಿದ್ದು! ಮತ್ತೆ ಎದ್ದು ನಿಂತರು ತಮಿಳರು.ಸರಿ ಸುಮಾರು ಎಪ್ಪತ್ತು ಜೀವಗಳು ಬಲಿದಾನಗೈದವು.ಕಡೆಗೆ ಆಗಿನ ಪ್ರಧಾನಿ ಶಾಸ್ತ್ರಿಗಳು ಹಿಂದಿಯೇತರ ರಾಜ್ಯಗಳು ಬಯಸುವವರೆಗೂ ಇಂಗ್ಲಿಷ್ ಸಹ ನಮ್ಮ ಆಡಳಿತಾತ್ಮಕ ಭಾಷೆಗಳಲ್ಲೊಂದಾಗಿರುತ್ತದೆ ಅಂತ ಹೇಳಿಕೆ ಕೊಟ್ಟ ಮೇಲೆ ಪರಿಸ್ಥಿತಿ ಹತೋಟಿಗೆ ಬಂದಿದ್ದು.ಆಗ ಕೈಗೊಂಡ ತಪ್ಪು ನಿರ್ಧಾರದಿಂದ ೧೯೬೭ರಲ್ಲಿ ಪಟ್ಟ ಕಳೆದುಕೊಂಡ ಕಾಂಗ್ರೆಸ್ಸ್ ಎಂಬ ಕಾಂಗ್ರೆಸ್ ಇವತ್ತಿನವರೆಗೆ ತಮಿಳುನಾಡಿನಲ್ಲಿ ಪತ್ತೆಯಿಲ್ಲದಂತಾಗಿದೆ.

ಈ ಎರಡು ಪ್ರಬಲ ಹೋರಾಟದಿಂದಾಗಿ ಹಿಂದಿಯನ್ನ ಮುಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳು (ದಕ್ಷಿಣ ಹಾಗೂ ಪೂರ್ವ) ಒಪ್ಪುವುದಿಲ್ಲ ಅಂತ ಮನವರಿಕೆಯಾದ ನಂತರ ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಪರೋಕ್ಷವಾಗಿ ಹಿಂದಿ ಹೇರಿಕೆಯನ್ನ ಶುರು ಹಚ್ಚಿಕೊಂಡಿದ್ದು.ಈ ಹಂತದಲ್ಲೇ ಬಂದಿದ್ದು ತ್ರಿಭಾಷಾ ಸೂತ್ರ!

ಅದನ್ನ ಹಲವು ರಾಜ್ಯಗಳು ಒಪ್ಪಿಕೊಂಡವು.ಅದರಲ್ಲಿ ಕರ್ನಾಟಕವು ಒಂದಾಗಿತ್ತು.ಅವೈಜ್ಞಾನಿಕ ತ್ರಿ ಭಾಷ ಸೂತ್ರದಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡ ಕಲಿಯದೇ ಸಹ ಒಬ್ಬ ಕನ್ನಡ ವಿದ್ಯಾರ್ಥಿ ಹೈ-ಸ್ಕೂಲ್ ಅನ್ನು ಸಂಸ್ಕೃತ,ಇಂಗ್ಲಿಷ್ ಹಾಗೂ ಹಿಂದಿ ಕಲಿತು ಮುಗಿಸಬಹುದಿತ್ತು.ಸಾಹಿತಿಗಳು,ಬುದ್ದಿಜೀವಿಗಳು ದನಿಯೆತ್ತಿದ್ದರಿಂದಾಗಿ ಬಂದ ‘ಗೋಕಾಕ್ ವರದಿ’ ಕನ್ನಡಕ್ಕೆ ಶಾಲೆಯಲ್ಲಿ ಪ್ರಥಮ ಭಾಷೆಯ ಸ್ಥಾನಮಾನ ನೀಡಬೇಕು ಅಂತ ಹೇಳಿತ್ತು.ಆದರೆ ಸರ್ಕಾರ ಕೆಲವು ಜನರ ವಿರೋಧ ನೋಡಿ ವರದಿ ಜಾರಿಗೆ ತರಲಿಲ್ಲ.ನಿಧಾನಕ್ಕೆ ಮತ್ತೆ ಚಳುವಳಿ ಶುರುವಾಯಿತು.ಕನ್ನಡಿಗರು ಯಥಾ ಪ್ರಕಾರ ಮಲಗೆ ಇದ್ದರು!!

Continue reading “ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…”

ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

‘ಇರಲಾರದೆ ಇರುವೆ ಬಿಟ್ಕೊಂಡ’ ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ.

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿಗೆ ಬಂದ ಈ ಆಸಾಮಿ, ಪ್ರತಿಷ್ಟಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು,ಜೇಬು-ಹೊಟ್ಟೆ ತುಂಬಿಸಿಕೊಂಡು , ಅದರ ಕೊಬ್ಬು ಜಾಸ್ತಿಯಾಗಿ My Love for South Indians ಅನ್ನೋ ಥರ್ಡ್ ರೇಟ್ ಲೇಖನ ಬರೆದಿದ್ದು ಅಲ್ಲದೆ, ಪುಣ್ಯಾತ್ಮ ಅದನ್ನ ಕಂಪೆನಿಯ ಮಿಂಚೆ ವಿಳಾಸದಲ್ಲಿ ತಿರುಪತಿ ಪ್ರಸಾದದಂತೆ ಹಂಚಿ ಸಿಕ್ಕಿ ಬೀಳಬಾರದಿದ್ದವರ ಕೈಗೆ ಸಿಕ್ಕಿ ಬಿದ್ದು, ಅವನು ಮಾಡಿದ ತಪ್ಪಿಗೆ ಕೆಲಸ ಕಳೆದು ಕೊಂಡಿದ್ದಾನೆ.

ಕೆಲಸ ಏನೋ ಕಳೆದು ಕೊಂಡ, ಆದರೆ ಈಗ ಮಾರ್ಕೆಟ್ನಲ್ಲಿ ಒಳ್ಳೆ openings ಇದೆ, ಸುಲಭವಾಗಿ ಒಳಗೆ ಸೇರಿಕೊಂಡರು ಸೇರಿಕೊಳ್ಳುತ್ತಾನೆ.ಅದೇ ಒಂದಿಷ್ಟು ದಿನ ಕೆಲಸವಿಲ್ಲದೇ ಮನೆಯಲ್ಲೇ ಇದ್ದ್ರೆ ಆಗ ಅವನ ಕೊಬ್ಬು ಕರಗಬಹುದೇನೋ?, ಅವನ ಅದೃಷ್ಟಕ್ಕೆ ಯಾರ ಕೈಗೂ ಸಿಕ್ಕಿ ಬಿದ್ದಿಲ್ಲ, ಬಿದ್ದರೆ ಅವನ ದಕ್ಷಿಣ ಭಾರತೀಯರ ಪ್ರೀತಿಗೆ ಒಂದಿಷ್ಟು ಪ್ರೇಮದ ಕಾಣಿಕೆ ಸಿಗುತಿತ್ತು.

ಹಿಂದೊಮ್ಮೆ ‘ಸ್ಯಾನ್ ಮಿತ್ರ’ ಅನ್ನೋ ಕೊಲ್ಕತ್ತದವ ಅಮೇರಿಕನ್ ಮೂಲದ ಕಂಪೆನಿಯಿಂದ ಇಂತದ್ದೆ ಕೆಲ್ಸಕ್ಕೆ ಕೈ ಹಾಕಿ, ಬೆಂಗಳೂರಿಂದ ಹೊರದಬ್ಬಿಸಿಕೊಂಡಿದ್ದ, ಆಮೇಲೆ ಮತ್ತಿನ್ನೊಂದು ಕಂಪೆನಿಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಉದ್ಯೋಗಿಯಿಂದಾಗಿ ಆ ಕಂಪೆನಿ ಕನ್ನಡ ಪರ ಹೋರಾಟಗಾರರ  ಆಕ್ರೋಶಕ್ಕೆ ತುತ್ತಾಗಿತ್ತು.

ಹೊಟ್ಟೆ ಪಾಡಿಗೆ ಅಂತ ಬೆಂಗಳೂರಿಗೆ ಬಂದವರು ತಾವು ಬಂದಿದ್ದರಿಂದಲೇ ಬೆಂಗಳೂರು ಬೆಳಕು ಕಾಣುತ್ತಿದೆ,ಉದ್ಧಾರ ಆಗ್ತಿದೆ ಅನ್ನೋ ಭ್ರಮೆಯಲ್ಲಿ ಇರುವಂತಿದೆ.ತಾವಿರುವ ಜಾಗದ ಸಂಸ್ಕೃತಿ,ಅಚಾರ,ವಿಚಾರ ,ಭಾಷೆಗೆ ಗೌರವ ನೀಡಿ ಬದುಕುವುದನ್ನ ಇವರು ಕಲಿಯಬೇಕಿದೆ.ಇಲ್ಲದಿದ್ದರೆ ಇಂತವರಿಗೆ ನಾವೇ ಖುದ್ದಾಗಿ ಕಲಿಸಬೇಕಿದೆ.

ಕನ್ನಡಿಗರ ಹಕ್ಕು ಮತ್ತು ಆಂಗ್ಲ ಮಾಧ್ಯಮಗಳು

ಯಾವಾಗಲೋ ಒಂದ್ ಸರಿ ಬಂದ್ರೆ ಎಲ್ಲೋ ಅಪ್ಪಿ ತಪ್ಪಿ ಹೀಗ್ ಬರ್ದಿರ್ಬೇಕು ಅನ್ಕೊಬಹುದಿತ್ತೇನೋ,ಆದ್ರೆ ಒಬ್ಬರಾದ ಮೇಲೆ ಒಬ್ರು ಸರದಿಯಲ್ಲೇನೋ ಅನ್ನು ವಂತೆ ಈ ಆಂಗ್ಲ ಪತ್ರಿಕೆಗಳು ಕನ್ನಡಿಗರ ಹಕ್ಕು ಪ್ರತಿಪಾದನೆಯನ್ನ ಮಹಾಪರಾದವೇನೋ ಎಂಬಂತೆ ಚಿತ್ರಿಸಲು ಹೊರಟಿವೆಯೇ?

ಮೊನ್ನೆ ಮೊನ್ನೆ ತಾನೇ ಲೋಕಾಯುಕ್ತರ ವಿಷಯದಲ್ಲಿ,ಕನ್ನಡದಲ್ಲಿ ಮಾತಾಡಿ ಅಂತ ಕೇಳಿದ್ದನ್ನ ‘ಪ್ರಾದೇಶಿಕ ಸಂಕುಚಿತತೆ’ ಅನ್ನುವ ಶೀರ್ಷಿಕೆ ಕೊಟ್ಟು ಒಂದು ಆಂಗ್ಲ ಪತ್ರಿಕೆ ಬರೆದ್ರೆ,ಈಗ ಮತ್ತೊಂದು ಆಂಗ್ಲ ಪತ್ರಿಕೆಯ ಸರದಿ.

ಬೆಂಗಳೂರು ಮಹಾನಾಗರ ಪಾಲಿಕೆಯ ಚುನಾವಣೆಯ ಮತ ಯಂತ್ರದಲ್ಲಿ ‘ಕನ್ನಡ’ಬಳಸಿದ್ದನ್ನು ಅಕ್ಷೇಪಿಸಿರುವ ಲೋಕ ಸತ್ತಾ  ಪಕ್ಷದ ಕೆಲವರ ಮಾತುಗಳನ್ನ ಪ್ರಕಟಿಸಿರುವುದೇನೋ ಸರಿ.ಆದ್ರೆ ಅದಕ್ಕೆ ಇಂತ  ಕಿತ್ತೋಗಿರೋ ಶೀರ್ಷಿಕೆ ಯಾಕೆ?ಯಾರ ಮಧ್ಯೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ ಇವ್ರು?ಒಂದು ಊರಿಗೆ ಬಂದ ಮೇಲೆ ಅಲ್ಲಿನ ಜನರ ರೀತಿ,ರಿವಾಜುಗಳನ್ನ ಕಲಿತು ಅವರೊಂದಿಗೆ ಬೆರೆತು ಬದುಕಬೇಕಾಗಿರುವುದು ಹೊರಗಿನಿಂದ ಬಂದವರ ಕರ್ತವ್ಯ.ಅವರಿಗೋಸ್ಕರ ಈ ನೆಲೆದಲ್ಲೇ ಹುಟ್ಟಿ ಬೆಳೆದು ಬಂದವರು ನಮ್ಮ ಭಾಷೆನ ಬಿಟ್ಟು ಇಂಗ್ಲಿಷ್ ಕಲಿಬೇಕಾ?

ನಮ್ಮ್ ಕರ್ಮಕ್ಕೆ ಕೆಲ ಕನ್ನಡಿಗರು ಮನೆಗೆ ತರಿಸೋದು ಆಂಗ್ಲ ಪತ್ರಿಕೆಯನ್ನೇ.ಇನ್ನ ಅದ್ರಲ್ಲಿ ಇಂತ ವಿಷಯಗಳನ್ನ ಇಲ್ಲದ ರೂಪದಲ್ಲಿ ಪ್ರೆಸೆಂಟ್ ಮಾಡಿದ್ರೆ,ಅದನ್ನ ಓದಿದವರು ಹಾಗೆ ಅರ್ಥ ಮಾಡ್ಕೊತಾರೆ.ಆಮೇಲೆ ಈ ಕನ್ನಡ ಸಂಘಟನೆಗಳು ಜಾಸ್ತಿ ಆಡ್ತಾವೆ ಹಂಗೆ ಹಿಂಗೆ ಬಿಟ್ಟಿ ಮಾತುಗಳಿಗೇನು ಬರಾನ?

ನಮ್ಮ್  ಹಕ್ಕುಗಳನ್ನ ಕೊಡಿ ಸರ್ ಅಂದ್ರೆ ,ಅದು ಅಪ್ರಾಧವೇನೋ ಅನ್ನೋ ರೀತಿಲಿ ಚಿತ್ರಿಸುವುದ್ಯಾಕೆ?ಒಂದು ನೆಲದ ಆಚಾರ,ವಿಚಾರ,ಸಂಸ್ಕೃತಿ,ಭಾಷೆ ಇವುಗಳನ್ನ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ನಮ್ಮ ಆಂಗ್ಲ ಪತ್ರಿಕೆಗಳಿಗೆ ಬರುವುದು ಯಾವಾಗ?

ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ…!?

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು’
ಅಂತ ‘ಹುಯಿಲಗೋಳ ನಾರಾಯಣರಾಯ’ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

‘ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’
ಅಂತ ಏಕೀಕರಣದ ನಂತರ ಬರೆದವರು ‘ಸಿದ್ದಯ್ಯ ಪುರಾಣಿಕ್’.

ಇವೆರಡು ಹಾಡುಗಳನ್ನ ವರ್ಷಕ್ಕೊಮ್ಮೆ ರಾಜ್ಯೋತ್ಸವದ ದಿನಗಳಲ್ಲಿ(ದಿನಗಳಲ್ಲಾದರೂ!) ನಾವು ಹಾಗೂ ನಮ್ಮ ರಾಜಕಾರಣಿಗಳು ನೆನಪಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕೆಳಗೆ ಇನ್ನೊಂದು ನತದೃಷ್ಟ ಹಾಡಿದೆ ನೋಡಿ.ಬಹಳಷ್ಟು ಜನ ಇದನ್ನ ಮರೆತಿದ್ದಾರೆ, ಹಲವರಿಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ,ಇನ್ನುಳಿದವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

‘ಬೆಂಕಿ ಬಿದ್ದಿದೆ ನಮ್ಮ ಮನೆಗೆ
ಓ ಬೇಗ ಬನ್ನಿ
ಕನ್ನಡ ಗಡಿಯ ಕಾಯೋಣ ಬನ್ನಿ
ಕನ್ನಡ ನುಡಿಯ ಕಾಯೋಣ ಬನ್ನಿ’

ಅಂತ ಬರೆದ ‘ಕಯ್ಯಾರ ಕಿಞಞಣ್ಣ ರೈ’ ಇಡಿ ಕಾಸರಗೋಡಿನ ಜನತೆಯ ನೋವನ್ನ ಈ ಸಾಲುಗಳಲ್ಲಿ ಅಭಿವ್ಯಕ್ತ ಪಡಿಸಿದ್ದರು.

ಮೊದಲ ಹಾಡು ಕನ್ನಡಿಗರ ಒಗ್ಗೂಡುವಿಕೆಯ ತುಡಿತವನ್ನ ಬಿಂಬಿಸಿದರೆ ,ಎರಡನೆಯದು ‘ಕರ್ನಾಟಕ ಏಕೀಕರಣದ ವಿಜಯದ (ಭಾಗಶಃ) ಸಂಕೇತ ಮತ್ತು ಮೂರನೆಯದು ‘ಕರ್ನಾಟಕದ ಕಾಸರೋಗೋಡಿನ (?) ಜನರ ನೋವಿನ’ ಸಂಕೇತ.

೨ ತಿಂಗಳ ಹಿಂದೆ ಭರ್ಜರಿಯಾಗಿ ನಮ್ಮ ೫೪ನೆ ವರ್ಷದ ರಾಜ್ಯೋತ್ಸವವನ್ನ ಆಚರಿಸಿದೆವು.ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು ಮತ್ತದು ಮುಂದಿನ ನವೆಂಬರ್ವರೆಗೆ ನಡೆಯುತ್ತಲೇ ಇರುತ್ತದೆ.ರಾಜ್ಯದ ಹಲವೆಡೆ ನಡೆಯುವ ಆಚರಣೆಗಳು ಪತ್ರಿಕೆ,ಟೀ.ವಿ ಗಳಲ್ಲಿ ವರದಿಯಾಗುತ್ತದೆ.ಅದೇ ದಿನ ಬೆಳಗಾವಿ ಕಡೆ ಕೆಲವರು ಭಗವಾಧ್ವಜ ಹಾರಿಸುತ್ತಾರೆ ಅದೂ ಸುದ್ದಿಯಾಗುತ್ತದೆ.ಕೊಡಗು,ಹೈದರಾಬಾದ್ ಕರ್ನಾಟಕದಲ್ಲಿ ಕರಾಳ ದಿನ ಅಂತಾರೆ ಅದೂ ಸಣ್ಣದಾಗಿಯಾದರೂ ಸುದ್ದಿಯಾಗುತ್ತದೆ.ಆದರೆ ಅಲ್ಲೊಂದು ‘ಕಾಸರಗೋಡು’ ಅಂತ ಇದೆ ನೋಡಿ.ಆ ಜನರ ಕೂಗು ಪತ್ರಿಕೆ, ಟೀ.ವಿ ಯವರಿಗೆ ಬಿಡಿ, ಕಡೆಗೆ ಅವರ ಪಕ್ಕದಲ್ಲೇ ಇರುವ ‘ದಕ್ಷಿಣ ಕನ್ನಡ’ದ ಜನರಿಗೆ,ರಾಜಕಾರಣಿಗಳಿಗೆ, ನಮ್ಮ ಮಹಾನ್ ಕರ್ನಾಟಕದ ಸರ್ಕಾರಕ್ಕೆ,ಕನ್ನಡಪರ ಹೋರಾಟಗಾರರಿಗೆ,ಸಂಘಟನೆಗಳಿಗೆ ಯಾರಂದ್ರೆ ಯಾರಿಗೂ ಕಾಣುವುದೇ ಇಲ್ಲ. ತೀರ ಕೆಲ ತಿಂಗಳುಗಳ ಹಿಂದೆ ‘ಕಾಸರಗೋಡು ಹೋರಾಟವನ್ನ ಬೆಂಗಳೂರಿಗೆ ತರುತ್ತೇವೆ’ ಅನ್ನುವ ಹೇಳಿಕೆಗಳು ಬಂದಿದ್ದವಾದರು ಅವು ಹೇಳಿಕೆಗಳಾಗೆ ಉಳಿದಿವೆ.ನವೆಂಬರ್ನಲ್ಲೊಂದು ಆರ್ಕೆಸ್ಟ್ರಾ ಮಾಡಿ ‘ರಾಜ್ಯೋತ್ಸವ’ ಆಚರಿಸಿ ಬಿಟ್ರೆ ಸಾಕಾ? ಗಡಿಯ ಅಂಚಿನಲ್ಲಿ ಅದೆಷ್ಟು ಕನ್ನಡ ಶಾಲೆಗಳಿವೆ?ಅಲ್ಲಿನ ಸ್ಥಿತಿ-ಗತಿಗಳೇನು?ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಇನ್ನ ಸರ್ಕಾರದವರನ್ನ ಕೇಳಲೇಬೇಡಿ ಬಿಡಿ ಪಾಪ ಅವರದು ‘ಕುರ್ಚಿ’ಗಾಗಿ ನಿರಂತರ ಹೋರಾಟ!.ರಾಷ್ಟ್ರ ಕವಿ ಕುವೆಂಪು ಅವರ ಭಾವ ಚಿತ್ರವನ್ನ ಹಾಕಿಕೊಂಡು ಹೋರಾಟ ಮಾಡುವ ನಾವು,ಮತ್ತೊಬ್ಬ ರಾಷ್ಟ್ರ ಕವಿ ‘ಗೋವಿಂದ ಪೈ’ ಅವರನ್ನು, ಅವರ ಊರನ್ನು ಮರೆತೇ ಬಿಟ್ಟಿದೇವೆಯೇ?

ಮಲಯಾಳಿ ‘ಪಣಿಕ್ಕರ್’ ಅವರು ಮಾಡಿದ ದ್ರೋಹಕ್ಕೆ ಬಲಿಯಾಗಿ ‘ಕಾಸರಗೋಡು’ ಕೇರಳಕ್ಕೆ ಸೇರಿತು. ನಮ್ಮನ್ನು ಸೇರಿಸಿಕೊಳ್ಳಿ ಅಂತ ಅವರು ಹೇಳುತ್ತಲೇ ಬಂದರೂ ನಾವು ಕೇಳುತ್ತ ಕೇಳುತ್ತ ಕೇಳಿಸದಂತಾಗಿ ಬಿಟ್ಟೆವು.ಈಗ ಹೇಳಿ ಹೇಳಿ ಅವರಿಗೂ ಸಾಕಗಿದೆಯೋ ಏನೋ? ಕಿಞಞಣ್ಣ ರೈ ಯವರು ಅಂದು ನೋವಿನಲ್ಲಿ ಬರೆದ ಆ ಸಾಲುಗಳನ್ನ ಅಂದಿಗೆ ಓದಿ ಒಂದೆರಡು ಹನಿ ಕಣ್ಣೀರು ಸುರಿಸಿ ಸುಮ್ಮನಾದವರಿಗೆ , ಇಲ್ಲೊಂದು  comfort zone  ಅಂತ  create  ಆದ ಮೇಲೆ ‘ಕಾಸರಗೋಡು’ ಹೋರಾಟದಲ್ಲಿ ಕೈ ಜೋಡಿಸಲು ಟೈಮು,ಮನಸ್ಸು ಎರಡು ಇರಲಿಲ್ಲ ಅನ್ನಿಸುತ್ತೆ. ಏಕೀಕರಣದ ನಂತರ ಭುಗಿಲೆದ್ದ ಅಸಮಾಧಾನಕ್ಕೆ ನೆಹರು ಪ್ರತಿಕ್ರಿಯಿಸಿ ‘೪ ಗ್ರಾಮಗಳು ಆ ಕಡೆ ಹೋಗಬಹುದು,೪ ಗ್ರಾಮಗಳು ಈ ಕಡೆ ಬರಬಹುದು.ಯಾರನ್ನೂ ನಾವೇನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಿಲ್ಲವಲ್ಲ’ ಅಂದಿದ್ದರು. ಬೆಂಕಿ ತಾಗಿದವ್ರಿಗೆ ಮಾತ್ರ ಬಿಸಿಯ ಅರಿವಾಗುವುದು. ಪಾಪ, ಅವರಿಗೆ ಇದೆಲ್ಲ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ,ಸಮಯ ಎರಡು ಇರಲಿಲ್ಲ ಬಿಡಿ.ಅವರಿಗಾದರೂ ನೋಡಲು ಇಡಿ ಭಾರತದ ಸಮಸ್ಯೆಗಳಿದ್ದವು!. ಆದರೆ ಕರ್ನಾಟಕದ ನಾಯಕರು ಏನು ನೋಡ್ತಾ ಇದ್ದಿರಬಹುದು!?

‘ಕಾಸರಗೋಡು’ ಕೇರಳಕ್ಕೆ ಸೇರಿದೆ ಅನ್ನುವುದು ಗೊತ್ತಾದಾಗ ಕಡೆ ಪಕ್ಷ ದಕ್ಷಿಣ ಕನ್ನಡ ಭಾಗದ ಜನ ಪ್ರತಿನಿಧಿಗಳು ತಮ್ಮ ಅಧಿಕಾರದಾಸೆ ಬಿಟ್ಟು ರಾಜಿನಾಮೆ ನೀಡಿ ಅಂದು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಲಿಲ್ಲ.ಈಗ ‘ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ’ ಅನ್ನುವ ಭಾಷಣಗಳು ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾದಾಗ ಬರುತ್ತಿವೆ ಅಷ್ಟೇ! ಗಡಿ ಸಮಸ್ಯೆಗಳನ್ನ ಆಯಾ ರಾಜ್ಯ ಸರ್ಕಾರಗಳೇ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರ ಹೇಳಿ ಕೈ ತೊಳೆದುಕೊಂಡಿತು. ಮಾತಾಡಬೇಕಾದವರು ಸದಾ ಕಾಲ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಎಲ್ಲ ಮರೆತು ಬಿಟ್ಟರು.

ನಮ್ಮ ರಾಜ್ಯದ ಜನ ಸೇವಕ(ನಾಯಕರಲ್ಲ!)ರನ್ನ ದೂರುವ ಮೊದಲು ನಾವುಗಳು (ಕನ್ನಡಿಗ ಮಹಾಪ್ರಭುಗಳು!) ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಬೇಡವೇ? ಇತ್ತ ‘ಕಾವೇರಿ’ದಾಗ ಅತ್ತ ಕರಾವಳಿ ಸೇರಿದಂತೆ ಹಲವೆಡೆ ಎಲ್ಲ ‘ತಣ್ಣ’ಗಿರುತ್ತದೆ.ನಾವ್ಯಾರು ಒಬ್ಬರಿಗೊಬ್ಬರು ಅಂತ ನಿಲ್ಲುವುದೇ ಇಲ್ಲ.ಅವರು ಕರೆದಾಗ ಇವರು ಹೋಗಲ್ಲ, ಇವ್ರು ಕರ್ದಾಗ ಅವ್ರು ಹೋಗಲ್ಲ ಅನ್ನೋ ತರ ಇದೆ ನಮ್ಮ ಸ್ಥಿತಿ. ನೆಲ-ಜಲದ ವಿಷಯಕ್ಕೆ  ‘ಕರ್ನಾಟಕ ಬಂದ್’ ಕರೆ ಕೊಟ್ರೆ ಹೆಚ್ಚೆಂದರೆ ೪-೫ ಜಿಲ್ಲೆಗಳು ‘ಬಂದ್’! .ಉಳಿದವರದು ‘ಹೇಯ್,ಬಿಡ್ರಿ ನಾವ್ ಯಾಕ್ ಮಾಡ್ಬೇಕು,ಅವ್ರಿಗೆ ಮಾಡೋಕೆನ್ ಕೆಲ್ಸ ಇಲ್ಲ’ ಅನ್ನೋ ಧೋರಣೆ!, ಬೆಂಬಲ ಕೊಡದೆ ಸುಮ್ನೆ ಇದ್ದ ನಾವ್ ಮಹಾನ್ ಬುದ್ದಿವಂತರು ಅನ್ನೋ ಮನೋಭಾವ.ತಮ್ಮ ಕಲೆಕ್ಷನ್ ಕಡಿಮೆಯಾದಾಗ ಬೀದಿಗಿಳಿಯುವ ಚಿತ್ರರಂಗಕ್ಕೆ ಆಗ ಅಸ್ತ್ರಗಳಾಗಿ ಸಿಗುವುದು ‘ಮಹಾಜನ್ ವರದಿ,ಸರೋಜಿನಿ ಮಹೀಷಿ ವರದಿ’ಗಳು.ಅವರ ಸಮಸ್ಯೆ ಮುಗಿತು ಅಂದ್ರೆ ಅಲ್ಲಿಗೆ ಮತ್ತೆ ಎಲ್ಲ ಶಾಂತಿ ಶಾಂತಿ!.

ನಮ್ಮ ರಾಜ್ಯದಲ್ಲಿರೋ ಕೊಡಗು,ಹೈದರಾಬಾದ್ ಕರ್ನಾಟಕದ ಕೆಲವರೇ ಪ್ರತ್ಯೇಕ ರಾಜ್ಯದ ಬೇಡಿಕೆಯಿಡುತಿದ್ದಾರೆ, ಮತ್ತಿನ್ಯಾಕೆ ಬೇರೆಯವರ ಹತ್ರ ಇರೋ ಭಾಗ ಕೇಳೋದು ಅಂತಾನು ನಮಗೆ ಅನ್ನಿಸಬಹುದು.ಹಾಸನದಿಂದ ಕೊಡಗಿನ ಕಡೆ ಹೊರಟರೆ ಹಾಸನ ಮುಗಿಯುವವರೆಗೆ ರಸ್ತೆ ಚೆನ್ನಾಗಿದೆ. ಕೊಡಗು ಪ್ರವೇಶಿಸುತ್ತಿದ್ದಂತೆ ಅಲ್ಲೊಂದು ಫಲಕವಿದೆ ‘ಕೊಡಗಿನ ಗಡಿ ಪ್ರಾರಂಭ’ ಅಂತ. ಆ ದಾರಿಯಲಿ ಹೋಗಿ ಬಂದ ಯಾರೋ ಪುಣ್ಯಾತ್ಮ ಅದನ್ನ ‘ಕೊಡಗಿನ ‘ಗುಂಡಿ’ ಪ್ರಾರಂಭ’ ಅಂತ ಬದಲಾಯಿಸಿದ್ದಾನೆ!.ಕಳೆದ ವರ್ಷ ಕೊಡಗಿಗೆ ಹೋದಾಗ ಇದನ್ನ ನೋಡಿದ್ದೇ, ಅದಕ್ಕಿಂತ ಮೊದಲು ಹೋಗಿದ್ದಾಗಲು  ನೋಡಿದ್ದೇ.ಈಗ ಆ ‘ಗುಂಡಿ-ಗಡಿ’ಯಾಗಿ ಪರಿವರ್ತನೆಯಾಗಿದೆಯೋ ಇಲ್ವೋ ಗೊತ್ತಿಲ್ಲ! ಬಹುಷಃ ಈಗಲೂ ಅದು ಗುಂಡಿಯೇ ಆಗಿದ್ದರೆ ಅವರು ಪ್ರತ್ಯೇಕ ‘ಗಡಿ’ ಕೇಳದೆ ಇನ್ನೇನು ತಾನೇ ಮಾಡಿಯಾರು ಹೇಳಿ?

ಮಹಾಜನ್ ಆಯೋಗ ಮಾಡುವಂತೆ ಪಟ್ಟು ಹಿಡಿದ ಮಹಾರಾಷ್ಟ್ರದವರು ವರದಿ ವ್ಯತಿರಿಕ್ತವಾಗಿ ಬಂದಿದ್ದರಿಂದ ಅದನ್ನ ಒಪ್ಪಲಿಲ್ಲ. ಒಂದು ವೇಳೆ ವರದಿಯೇನಾದರು ‘ಬೆಳಗಾವಿ’ ಅವರಿಗೆ ಸೇರಬೇಕು ಅಂದಿದ್ದಾರೆ ಸುಮ್ಮನಿರುತಿದ್ದರಾ? ಅವರು ಸುಮ್ಮನಾಗಿದ್ದರೂ ನಾವಾಗೆ ಮೈ ಮೇಲೆ ಬಿದ್ದು ತಗೊಂಡ್ ಹೋಗ್ರಪ್ಪ ಬೆಳಗಾವಿನ ಅಂತ ಕೊಡ್ತಿದ್ವೋ ಏನೋ?.ಬೆಳಗಾವಿ ಅವರಿಗೆ ಸೇರಿದ್ದಲ್ಲ ಅಂತ ಗೊತ್ತಿದ್ದರೂ,ಅದೇ ವಿಷಯವನ್ನ ಸಾಧ್ಯವಾದಗಾಲೆಲ್ಲ ಕೆದಕುವ ಮಹಾರಾಷ್ಟ್ರದ ರಾಜಕಾರಣಿಗಳಂತೆ ನಮ್ಮವರು atleast ಕಾಸರಗೋಡಿನ ವಿಷಯವನ್ನ ಜೀವಂತವಾಗಿಡಲು ಪ್ರಯತ್ನಿಸುತ್ತಿಲ್ಲ.ಬದಲಾಗಿ ‘ಸೀಮಾ ಪರಿಷತ್’ ನಂತಹ ಶಾಂತಿ ಕದಡುವ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾರೆ.ಹೆಚ್ಚೆಂದರೆ ನನ್ನಂತವರು ಕುಳಿತು ಅದರ ಬಗ್ಗೆ ಬರೆಯುತ್ತೇವೆ ಅಷ್ಟೇ, ಆದರೆ ಮೊನ್ನೆ ಅಲ್ಲಿ ಕ.ರ.ವೇ ಮಾಡಿದ ಹೋರಾಟಕ್ಕೆ ಅಭಿನಂದನೆ ಹೇಳಲೇಬೇಕು.ಇಂತ ಕೆಲವು ಕನ್ನಡ ಪರ ಸಂಘಟನೆಗಳಿರುವುದರಿಂದಲೇ ಬೆಳಗಾವಿಯಲ್ಲಿ ಎಂ.ಇ.ಎಸ್ ಆಟ ನಡೆಯುತ್ತಿಲ್ಲ.ಸರ್ಕಾರವನ್ನೇ ನಂಬಿ ಕೂತಿದ್ದರೆ ಬೆಳಗಾವಿಯು ಕೈ ಬಿಟ್ಟು ಹೋಗುತಿತ್ತೋ ಏನೋ? ಇದೆ ಹೋರಾಟದ ಸ್ಪೂರ್ತಿಯನ್ನ ಕಾಸರಗೋಡಿನ ವಿಲೀನದ ವಿಷಯದಲ್ಲೂ ತೋರಿಸಬಹುದಲ್ವಾ?

ಮಹಾಜನ್ ವರದಿಯನ್ನ ಜಾರಿಗೆ ತರಲು ಸಾಧ್ಯವಿಲ್ಲ ಅನ್ನೋದು  ಮಹಾರಾಷ್ಟ್ರ ಹಾಗು ಕೇರಳ ಸರ್ಕಾಗಳ ವಾದ.ಜಾರಿಯಾಗಲಿ ಅನ್ನೋದು ಕರ್ನಾಟಕದ ವಾದ.ಇದು ಮುಗಿಯದ ಕತೆ.ಅದರ ಬದಲು ಕೇಂದ್ರ ಸರ್ಕಾರವೇಕೆ ಬೇರೆ ಸೂತ್ರ ಹುಡುಕುತ್ತಿಲ್ಲ? ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತ ನಿರ್ಧರಿಸಿಬೇಕಾದವ್ರು ಅಲ್ಲಿ ಜೀವನ ನಡೆಸುತ್ತಿರುವ ಜನಗಳು.ಸಮಸ್ಯೆ ಪರಿಹರಿಸ ಬೇಕಿರುವ ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕಿದೆ.ಬಹುಷಃ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿದೆ. ಇದು ಸಾಧ್ಯವಿಲ್ಲ ವರದಿಯೇ ಅಂತಿಮ ಅಂತ ಕುಳಿತರೆ ಸಮಸ್ಯೆ ಬಗೆಹರಿಯುವುದೇ? ಬಗೆ ಹರಿದರೆ ಸಂತೋಷ ಇಲ್ಲದಿದ್ದರೆ,ಸ್ವಲ್ಪ ದಿನಗಳ ನಂತರ ಎಲ್ಲರ ನೆನಪಿನಿಂದ ಈ ವಿಷಯ ಮಾಸಿಯೂ ಹೋಗಬಹುದು (ಈಗಾಗಲೇ ಹೋಗಿಬಿಟ್ಟಿದೆ ಬಿಡಿ). ‘ಸ್ವಂತ ಮನೆ’ಯಿದ್ದುಕೊಂಡು ‘ಬಾಡಿಗೆ ಮನೆ’ಯಲ್ಲಿರುವ ನೋವು ಅವರಿಗೆ ಶಾಶ್ವತ!!

ಆಮೇಲೆ,

‘ಉದಯವಾಯಿತು ಚೆಲುವ ಕನ್ನಡ ನಾಡು’ ಅಂತ ಹಾಡಿಕೊಂಡು ಕಾಲ ತಳ್ಳೋಣ…

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ!?

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು ‘ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ’. ಓಹೋ,ಇದೇನೋ ಹೊಸ ಅಭ್ಯಾಸ ಅಂತ ಸವಿತ ಕೇಳಿದ್ರು.

ಅದಕ್ಕೆ, ನಾನು ಈಗ ಕೆಲವು FM ಗಳಲ್ಲಿ ಕನ್ನಡ ಹಾಡು ಮಾತ್ರ ಹಾಕ್ತಾ ಇದ್ದಾರೆ ಅಲ್ವಾ ಅಂದೆ, ಅದಕ್ಕೆ ಕಾರ್ತಿಕ್ ಹೌದು ಹೌದು , ಇತ್ತೀಚಿಗೆ ಕನ್ನಡದ ಹಾಡುಗಳು ಚೆನ್ನಾಗಿ ಬರುತ್ತಿವೆ ಅಂದ್ರು!

ನಾನು ಸವಿತ ಇಬ್ಬರು ಒಟ್ಟಿಗೆ “ಅಂದ್ರೆ ಏನಪ್ಪಾ ಮೊದಲೆಲ್ಲ ಚೆನ್ನಗಿರಲಿಲ್ವಾ?” ಅಂದ್ವು.
ಅವರು ” ಇಲ್ಲ ಇಲ್ಲ ‘ಮುಂಗಾರು ಮಳೆ’ ಬಂದ ಮೇಲೆ ಕನ್ನಡದಲ್ಲಿ ಹಾಡುಗಳು ಚೆನ್ನಾಗಿ ಬರ್ತಾ ಇದೆ” ಅನ್ನೋದಾ?

ಅಲ್ಲ ಗುರುವೇ, ನಿನಗೆ ಹಳೆ ಕನ್ನಡ ಚಿತ್ರ ಗೀತೆಗಳ ಬಗ್ಗೆ ಗೊತ್ತಾ? ಕೇಳಿದ್ದಿಯಾ? ಅಂದ್ರೆ,ಪುಣ್ಯಾತ್ಮ ಕಾರ್ತಿಕ್ ಅವರದೇ ಧಾಟಿಯಲ್ಲಿ ಹೇಳುತ್ತಾ ಹೋದರು,
‘ಸೋನು ,ಶ್ರೇಯ,ಸುನಿಧಿ,ಗಾಂಜಾವಾಲ’ ಎಲ್ಲ ಈಗ ಕನ್ನಡದಲ್ಲಿ ಹಾಡ್ತಾ ಇರೋದ್ರಿಂದ ಕ್ವಾಲಿಟಿ ಚೆನ್ನಾಗಿದೆ.

ಸವಿತ ಏನೇ ಹೇಳಿದರು, ಕಾರ್ತಿಕ್ಗೆ ಅವರು ಹೇಳಿದ್ದೆ ಸರಿ ಅನ್ನುವಂತೆ ಅಸಂಬದ್ಧವಾಗಿ ವಾದ ಮಾಡುತ್ತಲೇ ಹೋದರು. ಅಂದ ಹಾಗೆ ಈ ಕಾರ್ತಿಕ್ ಕನ್ನಡದವರಲ್ಲ, ತೆಲುಗಿನವರು. ಆದ್ರೆ ಕನ್ನಡ ಮಾತನಾಡುತ್ತಾರೆ,ಕನ್ನಡ ಸಿನಿಮಾ ನೋಡ್ತಾರೆ.

ಅವರು ಹೇಳಿದ ಮಾತಿನಿಂದ ನನಗೆ ಎರಡು ವಿಷಯಗಳು ತಲೆಯಲ್ಲಿ ಹರಿಯಲಾರಂಭಿಸಿತು.
೧. ಯಾವುದೇ ವಿಷಯದ ಅರಿವು ಇಲ್ಲದೆ, ಟೀಕೆ- ಟಿಪ್ಪಣಿ ಮಾಡುತ್ತಾ, ಸ್ವಲ್ಪ ಜ್ಞಾನವು ಇಲ್ಲದೆ ತೀರ್ಪನ್ನು ಕೊಟ್ಟು ಬಿಡುವ ಅವಿವೇಕಿಗಳ ಬಗ್ಗೆ.
೨. ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿಯಾಗಿ ಬಾಲಿವುಡ್ನ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ?

ಆದರೆ, ಇವೆರಡರಲ್ಲಿ ಮೊದಲನೆ ವಿಷಯ ಸ್ವಲ್ಪ ವಿಚಾರ ಮಾಡಬೇಕಾದದ್ದು, ಅದೇನಿದ್ದರೂ ವಿಚಾರವಾದಿಗಳಿಗೆ, ಬುದ್ದಿಜೀವಿ(?)ಗಳಿಗೆ ಇರಲಿ ಅಂತ ಬಿಟ್ಟು,ಎರಡನೇ ವಿಷಯದ ಬಗ್ಗೆ ಬರೆಯುತಿದ್ದೇನೆ.

ಹೌದು, ಇಲ್ಲ ಅಂದ್ರು ಇತ್ತೀಚಿಗೆ ಕನ್ನಡ ಚಿತ್ರಗಳಲ್ಲಿ ಅತಿ ಎನಿಸುವಷ್ಟು ಬಾಲಿವುಡ್ ಗಾಯಕ ಗಾಯಕಿಯರಿಗೆ ಮಣೆ ಹಾಕಲಾಗುತ್ತಿದೆ. ಖಂಡಿತ ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಶ್ರೇಯ ಹಾಡುವ ಶೈಲಿ ಇದೆಯಲ್ಲ, ಅವಳು ಒಂದೊಂದೇ ಶಬ್ದವನ್ನು ಅಪ್ಪಟ ಕನ್ನಡತಿಯಂತೆ ಉಚ್ಚಾರಿಸುತ್ತಾಳೆ, ಸೋನು ಹಾಡಿನಲ್ಲೇ ಕಿಕ್ ಬರಿಸುತ್ತಾನೆ ಅವರೆಲ್ಲ ಪ್ರತಿಭಾವಂತರೆ ಆ ಬಗ್ಗೆ ಎರಡು ಮಾತಿಲ್ಲ.

ಕನ್ನಡ ಚಿತ್ರ ರಂಗದಲ್ಲಿ ಇದು ಹೆಚ್ಚಾಗಿ ಆಗುತ್ತಿದೆ, ಹೀಗೆ ಸ್ವಲ್ಪ ದಿನದ ಹಿಂದೆ ಕನ್ನಡ ಗಾಯಕ ಗಾಯಕಿಯರು , ನಿರ್ಮಾಪಕರ ಈ ನೀತಿಯನ್ನು ವೀರೋಧಿಸಿದ್ದರು, ಆಗ ಒಬ್ಬ ಸಂಗೀತ ನಿರ್ದೇಶಕರು ‘ಇಲ್ಲಪ್ಪ, ಆಗಕ್ಕಿಲ್ಲ ಆ ಸೋನು , ಶ್ರೇಯ ಇಲ್ಲ ಅಂದ್ರೆ ನಂಗೆ ಮ್ಯೂಸಿಕ್ ಮಾಡಕ್ಕೆ ಆಗಕಿಲ್ಲ” ಅಂದ್ರು ಅಂತ ಪೇಪರ್ನಲ್ಲಿ ಓದಿದ ನೆನಪು. ಪಾಪ Sad ಅವರಿಗೆ ಆ ಗಾಯಕರ ಮೇಲೆ ಇರುವಷ್ಟು ನಂಬಿಕೆ ಅವರ ಸಂಗೀತದ ಮೇಲೆ ಇಲ್ಲ ಅನ್ನಿಸುತ್ತೆ!

ಈ ಮಾತು ಹೇಳುವಾಗ ಎಲ್ಲರೂ ಒಂದು ಮಾತು ಹೇಳುತ್ತಾರೆ “ಸಂಗೀತಕ್ಕೆ ಯಾವುದೇ ಭಾಷೆಯಿಲ್ಲ, ಕಲಾವಿದರಿಗೆ ಭಾಷೆಯ ಪರಿಧಿಯಿಲ್ಲ” ಅಂತ, ನಿಜ ನಿಜ ಒಪ್ಪುವಂತದ್ದೆ.

ನಮ್ಮ ನಿರ್ಮಾಪಕರ ತಲೆಯಲ್ಲಿ ಅದ್ಯಾವ ದೈವ ವಾಣಿ ಆಗಿದೆಯೋ ತಿಳಿಯದು, ಬಹಳಷ್ಟು ನಿರ್ಮಾಪಕರಿಗೆ ಸಂದರ್ಶನದಲ್ಲಿ “ಕನ್ನಡ ಗಾಯಕರನ್ನು ಏಕೆ ಬಳಸಿಲ್ಲ?” ಅಂತ ಕೇಳಿದರೆ, “ಬಾಲಿವುಡ್ ಗಾಯಕ/ಗಾಯಕಿಯರ ಹೆಸರಿದ್ದರೆ ಜನ ಹಾಡು ಜಾಸ್ತಿ ಕೇಳ್ತಾರೆ” ಅಂತಾರೆ.
ಅಂದ್ರೆ ಏನರ್ಥ ಸ್ವಾಮಿ ಸಂಗೀತ, ಸಾಹಿತ್ಯ ಹೇಗಿದ್ರು ಪರವಾಗಿಲ್ಲ, ಅವರು ಹಾಡಿಬಿಟ್ಟರೆ ಅದು ಚೆನ್ನಾಗಿ ಆಗುತ್ತೆ ಅಂತಾನಾ? ಅಬ್ಬಾ!

‘ಉಪ್ಪಿನಕಾಯಿಯನ್ನು ಊಟದ ಜೊತೆಗೆ ತಿಂದರೆ ಚಂದ, ಆದರೆ ಚೆನ್ನಾಗಿದೆ ಅಂತ, ಉಪ್ಪಿನಕಾಯಿಯನ್ನೇ ಊಟ ಎಂದು ತಿನ್ನಲಾಗುತ್ತದೆಯೇ?’

ನನಗೆ ಅನ್ನಿಸೋದು ಅವರನ್ನು ಬಳಸಿಕೊಳ್ಳೋದು ತಪ್ಪಲ್ಲ, ಆದರೆ ನಮ್ಮಲ್ಲೇ ಪ್ರತಿಭೆಗಳಿರುವಾಗ ಅವರನ್ನು ಸ್ವಲ್ಪ ಕಡಿಮೆಯಾಗಿ, ಬೇಕು ಎನಿಸುವಂತ ಹಾಡುಗಳಿಗೆ ಮಾತ್ರ ಕರೆಸಬಹುದಲ್ವಾ?

ನಿಮಗೆ ಈ ರೀತಿ ಅನ್ನಿಸುವುದಿಲ್ಲವೇ?

— ರಾಕೇಶ್ ಶೆಟ್ಟಿ Smiling

Blog at WordPress.com.

Up ↑

<span>%d</span> bloggers like this: