ಜನಗಣಮನ

26/09/2010

ಬೆಂಗಳೂರು ಮಳೆಯಲ್ಲಿ…

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 6:30 ಅಪರಾಹ್ನ

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ ಹೋಗೋಣ ಅಂದ.ಸರಿ ಅಂತ ಹೊರಟ್ವು.ಬಹುಶ ಅರ್ಧ ದಾರಿ ಹೋಗಿದ್ವು.ಹೊಟ್ಟೆ ಚುರು ಚುರು ಅನ್ನೋಕೆ ಶುರು ಆಗಿತ್ತು.ಶುರುವಾಯ್ತು ಭರ್ಜರಿ ಗಾಳಿ,ಮಳೆ.ಅಲ್ಲೇ ಒಂದು ಕಡೆ ಹೋಗಿ ನಿಂತು ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯ್ತಾ ಇದ್ವಿ.೧ ಗಂಟೆ ಕಳೆದರು ಮಳೆ ನಿಲ್ಲೋ ಹಾಗೆ ಕಾಣಲಿಲ್ಲ. ‘ಲೇ,ಇಲ್ಲೇ ನಿಂತ್ರೆ ಊಟ ಸಿಗೋಲ್ಲ,ಬಾ ಮಳೆಲಿ ಹೋಗಿ ಊಟ ಇದ್ರೆ ಪಾರ್ಸೆಲ್ ತಗೊಂಡು ಹೋಗೋಣ’ ಅಂದೇ.ಸರಿ ಅಂತೇಳಿ ನಾವ್ ಅಲ್ಲಿ ಹೋಗೋ ಅಷ್ಟೊತ್ತಿಗೆ ಅವ್ರು ಬಾಗಿಲು ಹಾಕಿದ್ರು. ಆಗಲೇ ೧೧.೨೦ ಆಗಿತ್ತು ಎಲ್ಲರು ಬಾಗಿಲು ಹಾಕಿಯಾಗಿತ್ತು.ಊಟ ಸಿಗ್ಲಿಲ್ಲ,ಸರಿ ವಾಪಸ್ ರೂಮ್ಗೆ ಹೋಗೋಣ ಅಂತ ಹೊರಟ್ರೆ,
ರಸ್ತೆ ಅನ್ನೋದು ನದಿಯ ರೂಪ ಪಡೆದಿತ್ತು.’ಬೆಂಗಳೂರಿನ ರಸ್ತೆಗಳಲ್ಲಿ ಅದೆಲೆಲ್ಲಿ ಓಪನ್ ಮ್ಯಾನ್ ಹೋಲ್ಗಳಿವೆಯೋ ಮೊದ್ಲೇ ಗೊತ್ತಾಗೊಲ್ಲ.ಈಗ ಮಳೆ ನೀರಿಗೆ ರಸ್ತೇನೆ ಕಾಣ್ತಾ ಇಲ್ಲ,ಹುಶಾರೋ ಲೋ, ಎಲ್ಲಾದರು ಗುಂಡಿಗೆ ಬಿದ್ಬಿಟ್ಟಿಯಾ,ಕಡಿಮೆ ಅಂದ್ರು ೭೦ ಕೆ.ಜಿ ಇದ್ದೀಯ ನಾನ್ ಅಂತು ಹೋದ್ರೆ ಹೋದೆ ಅಂತ ಬಿಟ್ಬಿಡ್ತೀನಿ’ ಅಂದೇ ಶ್ರೀಕಾಂತಂಗೆ. ನೀನ್ ಬಿದ್ರೆ ನಾನು ಹಂಗೆ ಮಾಡ್ತೀನಿ ಮಗನೆ ಅಂದ.ಕಡೆಗೆ ಈ ಟೆನ್ಶನ್ ಬೇಡ ಮಧ್ಯ ರಸ್ತೆಲೆ ನಡೆಯೋಣ ಅಂತೇಳಿ ನಿರ್ಧರಿಸಿ ಹೋಗ್ತಾ ಇದ್ರೆ ಕಿಟಕಿಯಿಂದ ಇಣುಕಿ ನೋಡೋ ಜನ ಇಂತ ಕೆಟ್ಟ ಮಳೆಯಲ್ಲಿ ಅದು ಅಂತ ರಸ್ತೆಯಲ್ಲಿ ಹೋಗೋ ನಮ್ಮನ್ನ ಮೆಂಟಲ್ಗಳು ಅನ್ಕೊಂಡಿದ್ರೋ ಏನೋ 🙂

ನಡ್ಕೊಂಡು ಹೋಗ್ತಾ ಇದ್ರೆ,ರಸ್ತೆ ಬದಿಯಲ್ಲಿ ಒಂದಿಷ್ಟು ಜಲಪಾತಗಳು, ಹಾಗೆ ಬುಡ ಸಮೇತ ಕಿತ್ತು ಬಿದ್ದ ಮರಗಳು!,ಹಾಗೆ ಮುಂದೆ ಬಂದು ಒಂದು ಸರ್ಕಲ್ ಹತ್ರ ಬಂದ್ವು,ಅಲ್ಲಿತ್ತು ನೋಡಿ ಮಜಾ.ಆ ರಸ್ತೆಯಲ್ಲಿ ಓಪನ್ ಮ್ಯಾನ್ ಹೋಲ್ ಜೊತೆಗೆ ಗುಂಡಿಗಳಿವೆ ಅನ್ನೋದು ನಮಗೆ ಗೊತ್ತಿತ್ತು.ಆದ್ರೆ ರಸ್ತೆ ತುಂಬಾ ನೀರ್ ತುಂಬಿದೆ ,ಎಲ್ಲಿ ಅಂತ ಹೋಗೋದು,ಇಬ್ರಿಗೂ ಈಗ ಪಿಚರ್ ಬಿಡೋಕೆ ಶುರು ಆಗಿತ್ತು.ಮಳೆಗೆ ಪೂರ್ತಿ ನೆನೆದಿದ್ವು,ಚಳಿಗೆ ಗಡ ಗಡ ನಡುಕ ಬೇರೆ ಜೊತೆಗೆ ಈ ಮ್ಯಾನ್ ಹೋಲ್ಗಳ ಹೆದರಿಕೆ.ಕಡೆಗೆ ಇಬ್ರು ಕೈ-ಕೈ ಇಡ್ಕೊಂಡು ಹೆಂಗೋ ಮನೆ ಹತ್ರ ಬಂದ್ವಿ,ಮನೆಯ ಬಳಿಯ ತಿರುವು ರಸ್ತೆಗೆ ಬಂದಾಗಲೇ ಗೊತ್ತಾಗಿದ್ದು,ಅಲ್ಲಾಗಲೇ ಮೊಣಕಾಲವರೆಗೆ ನೀರು ಹರಿತಿದೆ ಅಂತ.ಅದು ‘ಪವಿತ್ರ ಮೋರಿ’ಯ ನೀರು :).ಸಾಧಾರಣದವರನ್ನ  ಜೊತೆಗೆ ಕರ್ಕೊಂಡು ಹೋಗೋ ಅಷ್ಟು ರಭಸವು ಇತ್ತು.ಇಬ್ಬರು ಕೈ ಹಿಡಿದು ಹೆಜ್ಜೆ ಹೆಜ್ಜೆ ಇಡುತ್ತ ಮುಂದೆ ಬಂದು ನೋಡ್ತಿವಿ ಶ್ರೀಕಾಂತನ  ಫಿಯರೋ ಬೈಕು ನೀರಲ್ಲಿ ತೇಲ್ತ ಇತ್ತು, ಇನ್ನ ತಡ ಮಾಡಿದ್ರೆ ಕೊಚ್ಕೊಂಡು ಹೋಗುತ್ತೆ ಅಂತ ಕಷ್ಟ ಪಟ್ಟು ಗಾಡಿ ನಿಲ್ಲಿಸಿದಾಗ ಜಾಗಕ್ಕೆ ಹೋಗಿ ಇಬ್ಬರು ಸೇರಿ ಗಾಡಿಯನ್ನ ಎತ್ತಿ ನಿಲ್ಲಿಸ್ತ ಇದ್ವಿ,ನೀರಿನ ರಭಸ ಅದ್ಯಾವ ಪರಿ ಇತ್ತು ಅಂದ್ರೆ ಇಬ್ರು ಸೇರಿ ಅದನ್ನ ಎತ್ತಿ ನಿಲ್ಲಿಸೋಕೆ ಕಷ್ಟ ಪಡ್ತಾ ಇದ್ವಿ, ಅಷ್ಟೊತ್ತಿಗೆ ನನ್ನ ಡಿಸ್ಕವರ್ ಬೈಕು ಬಿತ್ತು,ಬಿದ್ದಿದ್ದೆ ತೇಲ್ಕೊಂಡು ಹೋಗೋಕೆ ಶುರುವಾಯ್ತು, ಇದ್ಯಾವ ಪಜೀತೆಲೆ, ನೀನ್ ನಿನ್ನ ಬೈಕ್ ಇಟ್ಕೋ ನಾನ್ ಅದನ್ನ ಹಿಡಿತೀನಿ ಅಂತ ಅದನ್ನ ಹೋಗಿ ಹಿಡಿದೇ.ಬಹಳಷ್ಟು ಕಷ್ಟ ಪಟ್ಟು,ಪಕ್ಕದ ಮನೆಯವರ ಬಳಿ ಹಗ್ಗ ತಗೊಂಡು ಎರಡು ಬೈಕನ್ನ ಗೇಟಿನ ಬಳಿ ತಂದು ಕಟ್ಟಿ ನಿಲ್ಲಿಸಿ ಉಸ್ಸಪ್ಪ ಅನ್ಬೇಕು ಅಷ್ಟರಲ್ಲಿ ‘ಒಂದು ಪಲ್ಸರ್ ಜೊತೆಗೆ ಆಸಾಮಿಯೊಬ್ಬ ತೇಲಿಕೊಂಡು ಬಂದ!’ ಅವನನ್ನ ಮತ್ತೆ ಪಲ್ಸರ್ನ ಹಿಡಿದು ನಿಲ್ಲಿಸಿ ಪಕ್ಕಕ್ಕೆ ಎಳೆದುಕೊಂಡ್ವು.

ಆಮೇಲೆ ನಮಗೆ ಅದೇ ಕೆಲಸ ಆಗೋಕೆ ಶುರುವಾಯ್ತು ಮತ್ತೆ ಇನ್ನೊಂದೆರಡು ಬೈಕು ಅದ್ರ ಸವಾರರು ಎಲ್ಲರನ್ನ ಹಿಡಿದಿಡು ಸೈಡ್ಗೆ ಹಾಕೋ ಕೆಲ್ಸ.ಅಷ್ಟರಲ್ಲಾಗಲೇ ಎದೆ ಮಟ್ಟದವರೆಗೆ ನೀರು ಏರಿತ್ತು.ಆ ಪಲ್ಸರಿನಲ್ಲಿ ಬಂದವ ಅಲ್ಲೇ ಗೇಟ್ ಮೇಲೆ ಹತ್ತಿ ಕುಳಿತು ‘ಸರ್,ಈ ತರ ಟೀ.ವಿಯಲ್ಲಿ ನೋಡಿದ್ದೇ,ಅನುಭವಿಸಿರಲಿಲ್ಲ.ಈ ಮಳೆಗೆ ಹಿಂಗೆ ನಾವು ಚಡಪಡಿಸ್ತ ಇದ್ದಿವೀ, ಇನ್ನ ಪಾಪ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರ ಕತೆ ಹೇಗಾಗಿರಬೇಡ ಅಂದ’ ಅವನ ಮುಖದಲ್ಲಿ ಭಯ ಆವರಿಸಿತ್ತು.ಪಾಪ ಇನ್ನ ತಡವರಿಸಿಕೊಳ್ಳುತ್ತ ಇದ್ದ.ಸುತ್ತ ಮುತ್ತಲಿನ ಮನೆಗಳಿಗೆಲ್ಲ ನೀರು ನುಗ್ಗಿತ್ತು,ನಮ್ಮ ಒವ್ನರ್ ಸೊಸೆ ಆ ಮಳೆ ನೀರಲ್ಲಿ ಜಾರಿ ಬಿದ್ದು ಕೈ ಫ್ರಾಕ್ಚರ್ ಮಾಡಿಕೊಂಡರು ಆ ರಾತ್ರಿ.ಸರಿ ಸುಮಾರು ೧೨ ಗಂಟೆಯಿಂದ ಆ ಮೋರಿಯ ನೀರೊಳಗೆ ನಿಂತುಕೊಂಡೆ ಬೈಕಿನೊಂದಿಗೆ ತೇಲಿ ಬರುವ ಜನರನ್ನ ಪಕ್ಕಕ್ಕೆ ನಿಲ್ಲಿಸುತಿದ್ದ ನಾವು ಊಟ ಮಾಡಿಲ್ಲ ಅನ್ನೋದು ಮರೆತೋಗಿತ್ತು,ಮಳೆಯ ಆರ್ಭಟಕ್ಕೆ ಹಸಿವು ಸೈಲೆಂಟ್ ಆಗಿತ್ತು.ಆಗ್ಲೇ ನಂಗೆ ನೆನಪಾಗಿದ್ದು ನನ್ನ ಪ್ರೀತಿಯ ಮೊಬೈಲ್.ಅದು ನನ್ನ ಜೊತೆಗೆ ನೀರಿನಲ್ಲೇ ಇತ್ತಲ್ಲ, ಪಾಪ ಅರೆ ಜೀವವಾಗಿತ್ತು. ಅದ್ರ ಡಿಸ್ಪ್ಲೆಯ್ ಹೋಗ್ಬಿಡ್ತು.ಆ ಡಬ್ಬ ಮೊಬೈಲ್ ಬದಲಾಯಿಸೋ ಅಂತ ಗೆಳೆಯರು ಅದೆಷ್ಟು ಬಾರಿ ಹೇಳಿದ್ರೋ ನಾನ್ ಮಾತ್ರ ಮೊದಲ ಸಂಬಳದಲ್ಲಿ ತಗೊಂಡಿದ್ದು ಲೇ, ಇದು ಇರೋವರೆಗೂ ಬೇರೆ ತಗೋಳೋದಿಲ್ಲ ಅಂದಿದ್ದೆ.ಈಗ ತಗೋಬೇಕಲ್ಲ ಅನ್ನೋ ಬೇಜಾರ್ ಬೇರೆ ಆಗಿತ್ತು.ಸರಿ ಮಳೆ ಒಂದು ಹಂತಕ್ಕೆ ಕಡಿಮೆಯಾಗಿತ್ತು ಅಷ್ಟರಲ್ಲಿ,ಆದರೆ ನೀರಿನ ಆರ್ಭಟ ಮುಂದುವರೆದಿತ್ತು.ಸರಿ ಅಂತೇಳಿ ಮೊದಲೇ ಮಹಡಿಯ ನಮ್ಮ ರೂಮಿಗೆ ಹೊರಟ್ವು,ನಾನು ಮೇಲೆ ನಿಂತು ನೋಡ್ತಾ ಇದ್ದೆ ಇನ್ನ ಯಾರಾದ್ರೂ ಬಂದು ಬೀಳ್ತಾರ ಅಂತ 😉

ಇಬ್ರು ಬಂದ್ರು ಸ್ಕೂಟಿ ಪೆಪ್ ಅಲ್ಲಿ, ನೀರಿನ ರಭಸಕ್ಕೆ ಗಾಡಿ ಜೊತೆ ಪಲ್ಟಿಯಾಗಿ ತೇಲೋಕೆ ಶುರು ಆದ್ರು.ಇಬ್ರು ಫುಲ್ ಟೈಟ್ ಆಗಿದ್ದವ್ರಂತೆ ಕಾಣ್ತಾ ಇದ್ರೂ.ಗಾಡಿ ಓಡಿಸುತಿದ್ದ ತಾತ ಮೇಲಿನ ಜೇಬಿನಲ್ಲಿದ್ದ ಮೊಬೈಲು ನೀರು ಪಾಲಾಯ್ತು.ಸ್ಕೂಟಿ ತೇಲ್ತ ಇತ್ತು ಅವರಲ್ಲಿ ಒಬ್ಬನಿಗೆ ನಿಶೆಯಲ್ಲಿ ಏನಾಗ್ತ ಇದೆ ಗೊತ್ತಾಗದೆ ಸುಮ್ಮನೆ ನೋಡ್ತಾ ಇದ್ದ,ಇನ್ನೊಬ್ಬ ತೇಲುತಿದ್ದ ಸ್ಕೂಟಿಯ ಹಿಡಿದು ತಾನು ತೇಲೋಕೆ ಶುರು ಮಾಡಿದ, ಇದೊಳ್ಳೆ ಕರ್ಮ ಆಯ್ತಲ್ಲ ಗುರು ಅಂತ ಮತ್ತೆ ಶ್ರೀಕಾಂತನ ಕರ್ದೆ ಬಾರಲೇ ಇನ್ನೊಬ್ಬ ಬಿದ್ದ ಅಂತ,ಅವರನ್ನ ಪಕ್ಕಕ್ಕೆ ಎಳೆದೆ ತಂದು ಹಾಕಿದ್ವು.ಅಷ್ಟರಲ್ಲಾಗಲೇ ನೀರಿನ ರಭಸ ಇಳಿದಿತ್ತು.ಮಳೆಯಲ್ಲಿ ನೆನೆದು,ನೀರಿನಲ್ಲೇ ನಿಂತಿದ್ದರಿಂದ ಶೀತ,ನೆಗಡಿ ಶುರುವಾಗಿತ್ತು.ರೂಮಿನಲ್ಲೇ ಇದ್ದ ‘ಔಷಧ’ವನ್ನ ಎರಡೇ ಎರಡು ಮುಚ್ಚುಳ ತೆಗೆದುಕೊಂಡು ಮಲಗುವಾಗ ಸಮಯ ೩ ಆಗಿತ್ತು! ಕಳೆದ ಶುಕ್ರವಾರ ಬೆಂಗಳೂರಿನಲ್ಲೇ ಸುರಿದ ಬಾರಿ ಮಳೆಯಿಂದ ಇದೆಲ್ಲ ನೆನಪಾಯ್ತು 🙂

ಆ ಮಳೆ ಬಂದ ದಿನ ೨೦೦೯ರ ಸೆಪ್ಟೆಂಬರ್ ೨೪.ಮೊನ್ನೆ ಮಳೆ ಬಂದಿದ್ದು ಸೆಪ್ಟೆಂಬರ್ ೨೪ ರಂದೇ ಅಲ್ವಾ!,ಹಾಗೆ ೫ ವರ್ಷದ ಹಿಂದೆ ಹೀಗೆ ಮಳೆ ಬಂದು ಸಿಲ್ಕ್ ಬೋರ್ಡ್ ಹತ್ರ ಕಾರುಗಳೆಲ್ಲ ನೀರಿನಲ್ಲಿ ತೇಲ್ತ ಇದ್ವು,ಬಸ್ಸಿನೋಳಗೆಲ್ಲ ನೀರು ಬರ್ತಿತ್ತು,ಆಗ ನನ್ನ ರೂಂ ಸಿಲ್ಕ್ ಬೋರ್ಡ್ ಹತ್ರ ಇತ್ತು 🙂 ,ಅದು ಕೂಡ ಸೆಪ್ಟೆಂಬರ್ ಸಮಯವೇ !,ಬೆಂಗಳೂರಿನ ಭಾರಜ್ರಿ ಮಳೆ ಸೆಪ್ಟೆಂಬರ್ ೨೪ಕ್ಕು ಏನಾದ್ರೂ ಲಿಂಕ್ ಇದ್ಯಾ? ಗೊತ್ತಿಲ್ಲ 🙂

ರಾಕೇಶ್ ಶೆಟ್ಟಿ 🙂

08/06/2010

ನೀವು ಸ್ವರ್ಗಕ್ಕೆ ಹೋಗಬೇಕಾ? – ಹಾಗಿದ್ರೆ ……..!!!

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 5:55 ಅಪರಾಹ್ನ
(ಇದನ್ನ ನಾನು ಬರೆದಿದ್ದು ೨೦೦೯ರ ಏಪ್ರಿಲ್ ೬ ರಂದು.ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ರು ಅನ್ನೋ ಗಾದೆ ತರ ನನಗಾದ ಅನುಭವವನ್ನ ಬರೆದು ಕೊಂಡರೆ,ಇದು ‘ಕಿಡಿ ಹಚ್ಚುವಂತ’ ಲೇಖನ ಅಂತೇಳಿ ಇದನ್ನ ಎತ್ತಂಗಡಿ ಮಾಡಲಾಗಿತ್ತು! ಇವತ್ತು ಏನೋ ಹುಡುಕುವಾಗ ಮತ್ತೆ ಈ ಲೇಖನ ಸಿಕ್ಕಿತ್ತು.ಅದನ್ನ ಯಾವುದೇ ಬದಲಾವಣೆ ಮಾಡದೆ ಹಾಗೆ ಇಲ್ಲಿ ಪ್ರಕಟಿಸುತಿದ್ದೇನೆ)

ರಾಮನವಮಿಯ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಕೋಸಂಬರಿ – ಪಾನಕ ಲೀಟರ್ಗಟ್ಟಲೆ ಸೇವಿಸಿ, ಸ್ವಲ್ಪ ಪಾರ್ಸಲ್ನೂ ತಗೊಂಡು ಹೊರಬರುವಷ್ಟರಲ್ಲಿ ‘ಕಾರ್ತಿಕ್’ ಫೋನ್ ಮಾಡಿ “MSR IT ” ಕಾಲೇಜ್ ಬಳಿ ಬರುವಂತೆ ಹೇಳಿದ, ಸರಿ ಅಂತ ಅತ್ತ ಹೊರತು ಅವನನ್ನು ಭೇಟಿಯಾಗಿ, ಹಾಗೆ ಪುಟ್ಪಾತ್ನಲ್ಲಿ ನಿಂತು ಮಾತಾಡುತಿದ್ದಂತೆ, ಒಬ್ಬ ೨೬ರ ಹರೆಯದ ಯುವಕ ಹಾಗು ಮತ್ತೊಬ್ಬ ಮಧ್ಯ ವಯಸ್ಕ ನಮ್ಮ ಬಳಿಬಂದರು, ಆ ಯುವಕ ನಮ್ಮಿಬ್ಬರ ಕೈಗೆ ಒಂದು ಕರಪತ್ರ ನೀಡಿ ” sir, u have some thing important in this” ಅಂದ, ನಾನೋ ಆ ಕರಪತ್ರದ ಮೊದಲ ಪುಟ ನೋಡುವ ಬದಲು ಅವಸರವಾಗಿ ೨-೩ ನೆ ಪುಟ ತೆಗೆದೆ, ಅದರಲ್ಲಿ ಜಾಗವೇ ಇಲ್ಲದಂತೆ ಪೂರ್ತಿ ಪುಟ ತುಂಬಿಸಿದ್ದರು, ನಾನು ಅವನತ್ತ ತಿರುಗಿ , ಏನ್ರಿ ಈಗ ನಾನು ಇದನೆಲ್ಲ ಓದಬೇಕಾ? ಅಂದೆ, ಅದಕ್ಕೆ ಆತ ಅದೆಲ್ಲ ಬೇಡ ಸರ್, ಮೊದಲ ಪುಟದಲ್ಲಿ ಒಂದು ಪ್ರಶ್ನೆಯಿದೆ ನೋಡಿ ಎಂದ.

ಆ ಪ್ರಶ್ನೆ “What does it take to get to Heaven?”

ಅವನು ನನ್ನತ್ತ ತಿರುಗಿ ಹೇಳಿ ಸರ್ ಹೇಗೆ ಸ್ವರ್ಗಕ್ಕೆ ಹೋಗಬಹುದು? ಅಂದ.
ನಾನು ತಲೆ ಕೆರೆದು ಕೊಂಡು ಹೇಳಿದೆ , “ಒಳ್ಳೆ ಕೆಲಸ ಮಾಡಿ , ಎಲ್ಲರಿಗೂ ಒಳ್ಳೆಯದನ್ನೇ ಹಾರೈಸಿ, ಇಷ್ಟು ಸಾಕು ಸೀದಾ ಅಲ್ಲಿಗೆ ಹೋಗ್ತಿರಾ”.

ಅವನು “ನೀವು ನಿಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲವೇ” ಅಂದ ,ನಾನು “ಯಾಕ್ರೀ ನೀವ್ ಮಾಡಿಲ್ವಾ?” ಅಂದೆ. “ಮಾಡಿದ್ದೀನಿ ಸರ್ , ನಾವು ಮನುಷ್ಯರೆಲ್ಲ ಪಾಪಿಗಳು ಬರಿ ಪಾಪ ಕಾರ್ಯವನ್ನೇ ಮಾಡುತ್ತವೆ, ಈ ನಮ್ಮ ಪಾಪ ಕಾರ್ಯಗಳಿಂದ ನಮಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದರೆ ಇರುವುದು ಒಂದೇ ದಾರಿ ಅದು , ಈ ಲೋಕದಲ್ಲಿ ತನ್ನ ಮಕ್ಕಳಿಗೆ ಸ್ವರ್ಗ ಪ್ರಾಪ್ತಿ ಮಾಡಿಸಲು ಹುಟ್ಟಿ ಬಂದು ತನ್ನ ದೇಹವನ್ನು ನಮಗೋಸ್ಕರ ತ್ಯಾಗ ಮಾಡಿದ ಜೀಸಸ್ ಅನ್ನು ನಂಬಿದರೆ ಮಾತ್ರ ಸಾಧ್ಯ”.

ನಾ ಕೇಳಿದೆ “ಅಂದ್ರೆ , ಈಗ ನಾನು ಸ್ವರ್ಗಕ್ಕೆ ಹೋಗಬೇಕು ಅಂದ್ರೆ ಜೀಸಸ್ ಅನ್ನು ನಂಬಲೆಬೇಕೆ?”, ಅದಕ್ಕೆ ಅವನು ಅದು ನಿಮಗೆ ಬಿಟ್ಟಿದ್ದು ಸರ್ ಅಂದ, ಮತ್ತೆ ಮುಂದುವರೆದು ಈ ಜಗತ್ತಿನಲ್ಲಿ ಬೈಬಲ್ ಒಂದೇ ಸತ್ಯ, ಅದು ಮಾತ್ರ ಸತ್ಯ ಅಂದ ಮೇಲೆ ಉಳಿದವೆಲ್ಲ ಸುಳ್ಳು ಅಂತಾಗುತ್ತದೆ, ಹಾಗೆ ದೇವರು ನಮ್ಮ ಪಾಪ ಕಾರ್ಯಗಳನ್ನು ತೊಳೆಯಲು ಒಮ್ಮೆ ಮಾತ್ರ ಬರುತ್ತಾನೆ ಅಂದ.
ಆದಕ್ಕೆ ನಾನು , ” ಜೀಸಸ್ ಬಹಳ ಗ್ರೇಟು ಅವನು ನಮ್ಮನ್ತಹವರಿಗೊಸ್ಕರ ಒಮ್ಮೆ ಹುಟ್ಟಿ ಬಂದ , ಆದರೆ ನಮ್ಮ ದೇವರು ಯುಗ ಯುಗಗಳಲ್ಲಿ ನಮಗೋಸ್ಕರ ಹುಟ್ಟಿ ಬರುತ್ತಲೇ ಇರುತ್ತಾರೆ” ಅಂದೆ.
ಅನ್ನುವಷ್ಟರಲ್ಲಿ ಅವನು ಮಧ್ಯ ಏನೋ ಹೇಳ ಹೊರಟ ತಡೆದು ಹೇಳಿದೆ , ಇಷ್ಟೊತ್ತು ನೀವು ಬೈಬಲ್ ಬಗ್ಗೆ ಹೇಳಿದ್ರಿ ನಾನು ಕೇಳಿದೆ , ಈಗ ನಾನು ಹೇಳುತ್ತೇನೆ ನೀವು ಕೇಳಿ ಅಂತ ಮುಂದುವರೆಸಿದೆ,

“ಬೈಬಲ್ ನಿಮಗಿಷ್ಟವಾದರೆ ಒಳ್ಳೆಯದು ಆದರೆ ಬೇರೆ ಧರ್ಮ ಗ್ರಂಥಗಳೆಲ್ಲ ಸುಳ್ಳು ಅಂತ ಯಾಕ್ರೀ ಹೇಳ್ತಿರಾ? ನಿಮಗೆ ಬೈಬಲ್ ಹೆಚ್ಚು.ನನಗೆ ನನ್ನ ಭಗವದ್ಗೀತೆ,ಮುಸಲ್ಮನನಿಗೆ ಕುರಾನ್,ಸಿಕ್ಖರಿಗೆ ಗ್ರಂಥ ಸಾಹೀಬ್. ನಿಮಗೆ ಕ್ರೈಸ್ತನಾಗಿರಲು ಹೇಗೆ ಸ್ವತಂತ್ರವಿದೆಯೋ, ಹಾಗೂ ನಿಮಗೆ ನಿಮ್ಮ ಧರ್ಮದ ಮೇಲೆ ಎಷ್ಟು ಪ್ರೀತಿ ಇದೆಯೋ , ಎಲ್ಲರಿಗೂ ಅವರವರ ಧರ್ಮದಲ್ಲಿ ಅಷ್ಟೇ ಪ್ರೀತಿ,ನಂಬಿಕೆ ಇರುತ್ತದೆ , ಆ ನಂಬಿಕೆಯನ್ನು ಪ್ರಶ್ನಿಸಬೇಡಿ, ಅದೇನೋ ಸತ್ತ ಮೇಲೆ ಹೋಗೋ ಸ್ವರ್ಗದ ಬಗ್ಗೆ ಮಾತಾಡುತ್ತ , ಬದುಕಿರುವವರನ್ನು ಧರ್ಮದ ಸಂಕೋಲೆಯಲ್ಲಿ ಸಿಕ್ಕಿಸಿ ಇಲ್ಲಿ ನರಕ ಸೃಷ್ಟಿ ಮಾಡಬೇಡಿ” ಅಂತ ಹೇಳಿ ಕೈಯಲ್ಲಿದ್ದ ರಾಮನವಮಿಯ ಪ್ರಸಾದವನ್ನು ಕೊಟ್ಟು ಅವನನ್ನು ಬೀಳ್ಕೊಟ್ಟೆ.

ಅವನು ಹೋದ ನಂತರ ಗೆಳೆಯ ಕಾರ್ತಿಕ್ ಕೇಳಿದ , “ಅಲ್ಲ ಗುರು ಅವನೇನೋ ಕೆಲ್ಸಕ್ಕೆ ಬಾರದ ವಿಷಯ ಹೇಳ್ತಾ ಇದ್ರೆ ನೀನ್ ಕೇಳ್ತಾ ಇದ್ಯಲ್ಲ”
ನಾ ಹೇಳಿದೆ ” ನೋಡಪ್ಪ , ಅವನು ಹೇಗೆ ನಮ್ಮ ತಲೆ ಸವರಿ ಕಿವಿಗೆ ಹೂವಿಡಲು ಬಂದನೋ, ನಾನು ಅಷ್ಟೇ ನೀಟಾಗಿ ಅವನ ತಲೆ ಸವರಿ ಪ್ರೀತಿಯಿಂದ ಆ ಹೂವನ್ನು ಅವನ ಕೈಗೆ ಕೊಟ್ಟು ಬಂದೆ, ಅಷ್ಟೇ”

ಈ ಎಲ್ಲ ಪ್ರಹಸನ ಮುಗಿದ ಮೇಲೆ ನನ್ನೊಳಗೆ ನಾನು ಕೇಳಿಕೊಂಡ ಪ್ರಶ್ನೆ “ಮಂಗಳೂರಿನಲ್ಲಿ ಚರ್ಚ್ ಮೇಲೆ ನಡೆದ ದಾಳಿ ಸುಮ್ಮನೆ ಆಗಿರಲಿಕ್ಕಿಲ್ಲ ”

07/06/2010

ಭಾರತ – ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 3:01 ಅಪರಾಹ್ನ

ಹೌದು!! ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

‘ಶೀತಲ ಸಮರ’ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಮುಂಬೈ ಮಾರಣ ಹೋಮದ ನಂತರ ಭಾರತ – ಪಾಕಿಸ್ತಾನದ ನಡುವೆ ಯುದ್ದ ಭೀತಿ ಶುರುವಾಗಿದೆಯಲ್ಲ (!), ಯುದ್ಧ ನಡೆದರೆ ಹೀಗಾಗಬಹುದು!!

ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)

ಭಾರತದ ಟೆಕ್ನಾಲಜಿ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!

ಸೈನ್ಯವು ‘ರಾಷ್ಟ್ರಪತಿ’ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು ‘ಕ್ಯಾಬಿನೆಟ್’ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕ ಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು ‘ಸಭಾತ್ಯಾಗ’ ಹಾಗೂ ‘ಗದ್ದಲವೆಬ್ಬಿಸುತ್ತಾರೆ’. ಲೋಕ ಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.
ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.

ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಹ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.

ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ Eye-wink

ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ ‘Made in China’ ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು ‘Made in USA’ ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.

ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.

ಈ ನಡುವೆ ಪಾಕಿಗಳು ‘ಕಳ್ಳ ಸಾಗಣೆ’ಯಲ್ಲಿ ತಂದ ‘Made in USA’ ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ Eye-wink

ಗುರಿ : ರಷ್ಯಾ !!!

ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.

ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.

ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!

– ರಾಕೇಶ್ ಶೆಟ್ಟಿ Smiling

(ಇದನ್ನ ಬರೆದು ೧ ವರ್ಷ ಆಗಿರಬೇಕು,ಮತ್ತೊಮ್ಮೆ ಈ ಬ್ಲಾಗ್ ಅಲ್ಲಿ  ಪೋಸ್ಟ್ ಮಾಡ್ತಾ ಇದ್ದೀನಿ)

04/04/2010

ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 3:56 ಅಪರಾಹ್ನ

ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ ಹೋಗದಂತೆ ತಡೆದ ಮ್ಯಾನೇಜರ್ಗೆ ಹಿಡಿ ಶಾಪ ಹಾಕಿ ಇದನ್ನ ಬರಿತಿದ್ದೀನಿ.

ಇವತ್ತ್ ಬೆಳಿಗ್ಗೆ ಮಲ್ಲೇಶ್ವರಮ್ಮಿನ ‘ಹಳ್ಳಿ ಮನೆ’ಯಲ್ಲಿ ‘ಮಂಗಳೂರು ಬನ್ಸ್-ಬಿಸಿ ಬಿಸಿ ಚಹಾ’ ಸ್ವಾಹ ಮಾಡಿದವನಿಗೆ ನೆನಪಾಗಿದ್ದು, ಮನೆಯಲ್ಲಿದ್ದಗಾ,ಅಮ್ಮ  ಏನೇ ತಿಂಡಿ ಮಾಡಿದ್ರು ‘ದಿನ ಏನ್ ತಿಂಡಿ ಅಂತ ಮಾಡ್ತಿರಮ್ಮ, ನೀವೇ ತಿನ್ಕೊಳ್ಳಿ ನಂಗ್ ಬೇಡ’ ಅಂತ ಕಮೆಂಟು ಹೊಡೆದು ಹೋಗ್ತಿದ್ದೆ.ಆದ್ರೆ ಈಗ ಬೆಂಗಳೂರಿನಲ್ಲಿ ಹೋಟೆಲ್ನವನಿಗೆನಾದ್ರು ಹಾಗೆ ಹೇಳಿದ್ರೆ ‘ಬೇಕಿದ್ರೆ ತಿನ್ನಪ್ಪ ಇಲ್ಲಾಂದ್ರೆ ಹೋಗು ‘ ಅಂತಾರೆ ಅಷ್ಟೇ 😉

ಆಗ ಅಮ್ಮ  ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ ಮಾಡಿದ್ರೆ ಮುಖ ಸಿಂಡರಿಸುತ್ತಿದೆ.ಈಗ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದ ಮೇಲೆ, ಅದೇ ಗೋಳಿ ಬಜೆ,ಬನ್ಸ್,ನೀರ್ ದೋಸೆ,ಕೋರಿ ರೊಟ್ಟಿಯನ್ನ   ಕಿಲೋಮೀಟರ್ಗಟ್ಟಲೆ ಹುಡುಕಿಕೊಂಡು ಹೋಗಿ ತಿಂದು ಬರ್ತೀನಿ.ತಿಂದ ಮೇಲೆ ಅಮ್ಮನ ಕೈರುಚಿ ಸಿಗುವುದಿಲ್ಲವಲ್ಲಾ 😦

ಮನಸಿನಲ್ಲೇ ಅನ್ಕೊಳ್ಳೋದು ‘ಮಗನೆ,ಮಾಡಿ ಕೊಡುವಾಗ ಧಿಮಾಕು,ಕಮೆಂಟು ಹೊಡಿತಿದ್ಯಲ್ಲ,ಹಿಂಗೆ ಆಗ್ಬೇಕು ಬಿಡು’ ಅಂತ.ಎಲ್ಲ ತಿಂಡಿಗಳಿಗಿಂತ ಹೆಚ್ಚಾಗಿ ನಾ ಮಿಸ್ ಮಾಡಿಕೊಳ್ತಾ ಇರೋದು ‘ಭೂತಾಯಿ ಮೀನಿನ ಸಾರು ಮತ್ತೆ ಫ್ರೈ’ 😉

ಹಾಂ! ಅಂದ ಹಾಗೆ ನೀವು ಮಂಗಳೂರು ಬನ್ಸ್ ತಿಂದಿಲ್ಲ ಅಂದ್ರೆ ಒಮ್ಮೆ ತಿಂದು ನೋಡಿ, ಜೊತೆಗೆ ಚಹಾದ ಕಾಂಬಿನೇಶನ್ ಇದ್ರೆ ಮಸ್ತ್!, ನೀವು ಸಸ್ಯಹಾರಿ ಅಲ್ಲವಾದರೆ ‘ಭೂ ತಾಯಿ ಮೀನಿನ ರುಚಿಯೂ ನೋಡಿ,ಹಾಂ! ಬೆಂಗಳೂರಿನಲ್ಲಿ ಭೂತಾಯಿಗೆ ‘ಮತ್ತಿ’ ಅಂತಾರೆ’

Blog at WordPress.com.

%d bloggers like this: