ಜನಗಣಮನ

01/09/2010

ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

Filed under: ಅವಿಭಾಗೀಕೃತ — ರಾಕೇಶ್ ಶೆಟ್ಟಿ @ 5:46 ಅಪರಾಹ್ನ

“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.

ಅವ್ರು ಹೇಳಿದ್ ಮಾತ್ಗಳನ್ನ ಒಮ್ಮೆ ಕೂತು ಯೋಚಿಸಿ ನೋಡಿದೆ.ಹೌದಲ್ಲ! ನಮ್ಮ ಚಿತ್ರರಂಗದವರು ‘ಓಂ’ ಚಿತ್ರ ಗೆದ್ದಾದ ಮೇಲೆ ದಶಕಗಳ ಕಾಲ ಮಚ್ಚು,ಲಾಂಗು ಹಿಡಿದು ಟಿ.ಎಂ.ಸಿಗಟ್ಲೆ  ರಕ್ತ ಚೆಲ್ಲಾಡಿ,ಮಧ್ಯೆ ‘ತವರಿನ’ ನೆನಪಾಗಿ  ತೊಟ್ಟಿಲು,ಬಟ್ಟಲು,ಬಿಂದಿಗೆ,ಚೊಂಬು ಎಲ್ಲ ತಂದು,ಕಡೆಗೆ ‘ಮುಂಗಾರು ಮಳೆ’ ಬಂದ್ ಮೇಲೆ ಪ್ರವಾಹದ ರೀತಿಯಲ್ಲಿ ಪ್ರೀತಿಯ ಮಳೆ ಸುರಿಸುತ್ತಾ,ಒಂದ್ಸರಿ ತಮಿಳು ಸಿನೆಮ, ಇನ್ನೊಂದ್ಸರಿ ತೆಲುಗು ಸಿನೆಮ,ಟೈಮ್ ಸಿಕ್ಕಾಗ ಮಲಯಾಳಂ,ಹಿಂದಿ ಸಿನೆಮಾಗಳನ್ನ ನೋಡಿ ಆ ರೀಲುಗಳನ್ನ ಇಲ್ಲಿಗ್ ತಗಂಡ್ ಬಂದು,ಅದನ್ನ ಇಲ್ಲಿ ಬಿಚ್ಚಿ ಅದೇ ಕತೆಗೆ ಕನ್ನಡದ ಬಣ್ಣ (ಅದನ್ನು ಸರಿಯಾಗ್ ಬಳಿಯೋದಿಲ್ಲ ಎಷ್ಟೋ ಜನ,ಅದು ಇರ್ಲಿ ಬಿಡಿ) ಬಳಿದು ಮೇಲ್ಗಡೆ ಆ ಸ್ಟಾರು,ಈ ಸ್ಟಾರು ಅಂತ ಹೆಸ್ರಾಕಂಡು ರಿಲೀಸ್ ಮಾಡ್ತಾರೆ.ಜನ ಬಂದ್ ನೋಡ್ತಾರಾ?,ಎಲ್ಲೋ ನಮ್ಮಂತ ಕನ್ನಡ ಚಿತ್ರಗಳನ್ನ ಮಾತ್ರ ನೋಡೋ ಮಂದಿ ವಿಧಿಯಿಲ್ಲದೇ ಬಂದು ನೋಡ್ತಾರೆ.ಉಳಿದವರು ‘ಬನ್ರೋ,ಆ ಸಿನೆಮ ಬಂದೈತೆ ನೋಡನ’ ಅಂದ್ರೆ ‘ಹೇಯ್,ಹೋಗಲೇ ಅದನ್ನ ಆ ಭಾಷೆಯಲ್ಲೇ ನೋಡಿವ್ನಿ.ಯಾವ್ದಾದ್ರು ಇವರೇ ಮಾಡಿರೋ ಕತೆಯಿದ್ರೆ ಹೇಳು ಬತ್ತಿನಿ ನೋಡಕೆ’ ಅಂತಾರೆ.

ಅನ್ಯ ಭಾಷೆಯ ಚಿತ್ರಗಳ ಹಕ್ಕುಗಳಿಗಾಗಿ ಆ ನಟ/ಈ ನಟ ರ ನಡುವೆ ತೆರೆ ಮರೆಯ ಕಸರತ್ತು ನಡೆಯುತ್ತಿದೆ ಅನ್ನುವಂತ ಸುದ್ದಿಗಳು ಮಾಮೂಲಾಗಿವೆ.ಹಾಗೆ ಸರ್ಕಸ್ ಮಾಡಿ ತಗೊಂಡು ಬರೋ ಕತೆಯೇನು ಆಕಾಶದಿಂದ ಉದುರಿದ್ದ? ಅಥವಾ ಯಾರಿಗೂ ಹೊಳೆಯದೆ ಇರೋ ಕತೆ ನಾ?.ಎರಡು ಅಲ್ಲ, ರಿಮೇಕ್ ಅನ್ನೋ ರೆಡಿಮೇಡ್ ತಿಂಡಿ ರುಚಿ ನೋಡಿರೋ ಜನ, ತಾವೇ ಅಡಿಗೆ ಮಾಡೋಕೆ ಇಷ್ಟ ಪಡ್ತಾ ಇಲ್ಲ.ಹೋಗ್ಲಿ ಆ ಚಿತ್ರಗಳನ್ನಾದರು ಬೇಗ ತಂದು ರಿಮೇಕ್ ಮಾಡ್ತಾರ ಅದು ಇಲ್ಲ.ಇತ್ತೀಚಿಗೆ ತಾನೇ ಬಂದ ತೆಲುಗು ಚಿತ್ರದ ರಿಮೆಕ್ನ, ಆ ಸಿನೆಮಾ  ಬಂದು ೪-೫ ವರ್ಷಗಳಾಗಿರಬಹುದು.ಅದನ್ನ ಬಹಳಷ್ಟು ಜನ ಈಗಾಗಲೇ ತೆಲುಗು,ತಮಿಳಿನಲ್ಲಿ ನೋಡಿದ್ದಾರೆ, ಇನ್ನ ಕನ್ನಡದಲ್ಲಿ ತೆಗೆದರೆ ಓಡುತ್ತಾ?ದುಡ್ಡು ಮಾಡುತ್ತಾ!?, ಹ್ಞೂ! ಇದ್ಯಾವುದರ ಯೋಚನೆ ಇಲ್ಲದಂತೆ ಚಿತ್ರೀಕರಿಸಿ ಬಿಡುಗಡೆ ಮಾಡಿ ಕಡೆಗೆ ಜನ ಪ್ರೋತ್ಸಾಹ ನೀಡುತ್ತಿಲ್ಲ ಅಂತ ಅಲವತ್ತು ಕೊಳ್ಳೋದು.ಇದ್ಯಾವ ಬಿಸಿನೆಸ್ಸು? ಈ ರೀತಿ ಮಾಡಿ ಕಡೆಗೆ ನಮ್ಮ ಚಿತ್ರರಂಗದ ವ್ಯಾಪ್ತಿ ಚಿಕ್ಕದು,ಚಿತ್ರಗಳು ಸೋಲುತ್ತಿವೆ ಅನ್ನೋದು ಯಾಕೆ?

ಈ ಪರಿಯಾಗಿ ರಿಮೇಕ್ ನಮ್ಮ ಚಿತ್ರರಂಗವನ್ನ ಆವರಿಸಿ ಕೂತಿದೆ.ರಿಮೇಕ್ ಬ್ಯಾಡ ಅಂದ್ರೆ ಯಾಕ್ರೀ ಬ್ಯಾಡ ಅಂತ ಮೈಮೇಲೆ ಬೀಳೋ ಬಹುತೇಕ ಮಂದಿ, “ಬನ್ರಿ ಸ್ವಾಮೀ, ಡಬ್ಬಿಂಗ್ ಮಾಡನ” ಅಂದ್ರೆ ಗುರ್ರ್ ಅಂತಾರೆ.ಯಾಕೆ? ರಿಮೇಕ್ ಮಾಡುವಾಗ ಬಾರದಿರೋ ಮಡಿವಂತಿಕೆ ಡಬ್ಬಿಂಗ್ ಮಾಡುವಾಗ ಯಾಕೆ ಬರುತ್ತೆ?,ಮೊನ್ನೆ ಮೊನ್ನೆ ತಾನೇ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ!ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಡಬ್ಬಿಂಗ್ ಮಾಡಿದರೆ ಆಗುವ ಲಾಭಗಳಾದರು ಏನು ನೋಡೋಣ.

೧. ಕನ್ನಡದ ಕಂಠ ದಾನ ಕಲಾವಿದರಿಗೆ,ಕೆಲ ತಂತ್ರಜ್ಞರಿಗೆ,ಚಿತ್ರ ಮಂದಿರದವರಿಗೆ ಕೆಲ್ಸ ಸಿಗುತ್ತದೆ.

೨. ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರ ೩-೪ ವರ್ಷ ಬಿಟ್ಟು ಇಲ್ಲಿ ರಿಮೇಕ್ ಮಾಡಿ ಹೊಸತರಂತೆ ತೋರಿಸುವದು ನಿಲ್ಲುತ್ತದೆ.

೩.ರಿಮೇಕ್ ಕಡಿಮೆಯಾದಲ್ಲಿ ಸೃಜನಶೀಲತೆ ಹೆಚ್ಚುತ್ತದೆ.ಅದರಿಂದ ಕನ್ನಡ ಚಿತ್ರ ರಂಗ ಇನ್ನ ಬೆಳೆಯುತ್ತದೆ.

೪.ಈಗಿನ ಕನ್ನಡ ಪ್ರೇಕ್ಷಕರು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲೂ ಅನ್ಯ ಭಾಷೆಯ ಸಿನೆಮವನ್ನ ಅರ್ಥ ಆಗದೆ ಇದ್ರೂ ನೋಡ್ತಾರಲ್ವಾ, ಅವರೆಲ್ಲ ಆ ಸಿನೆಮಾಗಳು ಕನ್ನಡದಲ್ಲೇ ಡಬ್ ಆಗಿ ಬಂದ್ರೆ ಅವನ್ನೇ ನೋಡ್ತಾರೆ.ಕನ್ನಡನು ಉಳಿಯುತ್ತೆ.ಮತ್ತು ಅಷ್ಟರ ಮಟ್ಟಿಗೆ ನಾವು ಬೇರೆ ಭಾಷೆಯನ್ನ ನಮ್ಮ ನೆಲದಲ್ಲಿ ಬೇರೂರದಂತೆ ಮಾಡಬಹುದು.

ಇನ್ನ ನಷ್ಟ ಯಾರಿಗೆ?

೧. ಕೇವಲ ರಿಮೇಕ್ ಸಿನೆಮಾವನ್ನೇ ನಿರ್ಮಿಸೋ,ನಿರ್ದೇಶಿಸೋ,ನಟಿಸೋ ಅಂತವರಿಗೆ ಮಾತ್ರ.

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

ಈಗಾಗಲೇ ಡಬ್ಬಿಂಗ್ ಪರವಾಗಿ ಹಲವಾರು ಜನ ಪತ್ರಿಕೆಗಳಿಗೆ ಬರೆಯುತ್ತಲೇ ಇದ್ದಾರೆ.ಆದ್ರೆ ವಿರೋಧಿಸುವ ಜನರು ಯಾಕೆ ಸಮರ್ಪಕ ಉತ್ತರ ನೀಡುತ್ತಿಲ್ಲ? ಮೊನ್ನೆ ಮೊನ್ನೆ ಪಾರ್ವತಮ್ಮ ಅವ್ರು ಯಾರದು ಡಬ್ಬಿಂಗ್ ಪರವಾಗಿ ಮಾತಾಡಿದ್ರೆ ಬೀದಿಗಿಳಿದು ಹೋರಾಟ ಮಾಡ್ತೀನಿ ಅಂದಿದ್ದಾರೆ.ಬೀದಿಗಿಳಿದು ಹೋರಾಟ ಮಾಡೋ ಬದ್ಲು ಸ್ವಲ್ಪ logical ಆಗಿ ಡಬ್ಬಿಂಗ್ ಯಾಕೆ ಬೇಡ?ರಿಮೇಕ್ ಯಾಕೆ ಬೇಕು ಅನ್ನೋದನ್ನ ಸಮಾಧಾನವಾಗಿ ಹೇಳೋಕೆ ಆಗೋಲ್ವಾ? ಈಗೇನು ಕನ್ನಡದಲ್ಲಿ ಬೇಜಾನ್ ನ್ಯೂಸ್ ಚಾನೆಲ್ಗಳೀವೆ, ಅಲ್ಲೆ ಬಂದು ಪರ-ವಿರೋಧದ ಚರ್ಚೆ ಮಾಡಬಹುದಲ್ವಾ?ನಿಜ ವಿಷಯ ಜನರಿಗೆ ತಲುಪುತ್ತೆ.

ಜಗತ್ತಿನ ವಿವಿಧ ದೇಶದ ಅತುತ್ತಮ ಚಿತ್ರಗಳು,ಕಾರ್ಯಕ್ರಮಗಳನ್ನ ‘ಕನ್ನಡ’ ಭಾಷೆಯಲ್ಲಿ ನೋಡಲಿಚ್ಚಿಸುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು ಮತ್ತು ಇದನ್ನ ಕೇವಲ ಬೆರಳೆಣಿಕೆಯಷ್ಟು ಜನ ನಿರ್ಧರಿಸಲಾಗದು ಅನ್ನುವ ಜಾಗೃತಿ ಕನ್ನಡಿಗರಿಗೆ ಮೂಡಬೇಕು.ಯಾರೋ ಅಬ್ಬರಿಸಿ ಬೋಬ್ಬಿರಿದರೆ ಯಾಕೆ ಮಾತಾಡಲು ಭಯಪಡಬೇಕು?

ರಾಕೇಶ್ ಶೆಟ್ಟಿ 🙂

08/06/2010

ನೀವು ಸ್ವರ್ಗಕ್ಕೆ ಹೋಗಬೇಕಾ? – ಹಾಗಿದ್ರೆ ……..!!!

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 5:55 ಅಪರಾಹ್ನ
(ಇದನ್ನ ನಾನು ಬರೆದಿದ್ದು ೨೦೦೯ರ ಏಪ್ರಿಲ್ ೬ ರಂದು.ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ರು ಅನ್ನೋ ಗಾದೆ ತರ ನನಗಾದ ಅನುಭವವನ್ನ ಬರೆದು ಕೊಂಡರೆ,ಇದು ‘ಕಿಡಿ ಹಚ್ಚುವಂತ’ ಲೇಖನ ಅಂತೇಳಿ ಇದನ್ನ ಎತ್ತಂಗಡಿ ಮಾಡಲಾಗಿತ್ತು! ಇವತ್ತು ಏನೋ ಹುಡುಕುವಾಗ ಮತ್ತೆ ಈ ಲೇಖನ ಸಿಕ್ಕಿತ್ತು.ಅದನ್ನ ಯಾವುದೇ ಬದಲಾವಣೆ ಮಾಡದೆ ಹಾಗೆ ಇಲ್ಲಿ ಪ್ರಕಟಿಸುತಿದ್ದೇನೆ)

ರಾಮನವಮಿಯ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಕೋಸಂಬರಿ – ಪಾನಕ ಲೀಟರ್ಗಟ್ಟಲೆ ಸೇವಿಸಿ, ಸ್ವಲ್ಪ ಪಾರ್ಸಲ್ನೂ ತಗೊಂಡು ಹೊರಬರುವಷ್ಟರಲ್ಲಿ ‘ಕಾರ್ತಿಕ್’ ಫೋನ್ ಮಾಡಿ “MSR IT ” ಕಾಲೇಜ್ ಬಳಿ ಬರುವಂತೆ ಹೇಳಿದ, ಸರಿ ಅಂತ ಅತ್ತ ಹೊರತು ಅವನನ್ನು ಭೇಟಿಯಾಗಿ, ಹಾಗೆ ಪುಟ್ಪಾತ್ನಲ್ಲಿ ನಿಂತು ಮಾತಾಡುತಿದ್ದಂತೆ, ಒಬ್ಬ ೨೬ರ ಹರೆಯದ ಯುವಕ ಹಾಗು ಮತ್ತೊಬ್ಬ ಮಧ್ಯ ವಯಸ್ಕ ನಮ್ಮ ಬಳಿಬಂದರು, ಆ ಯುವಕ ನಮ್ಮಿಬ್ಬರ ಕೈಗೆ ಒಂದು ಕರಪತ್ರ ನೀಡಿ ” sir, u have some thing important in this” ಅಂದ, ನಾನೋ ಆ ಕರಪತ್ರದ ಮೊದಲ ಪುಟ ನೋಡುವ ಬದಲು ಅವಸರವಾಗಿ ೨-೩ ನೆ ಪುಟ ತೆಗೆದೆ, ಅದರಲ್ಲಿ ಜಾಗವೇ ಇಲ್ಲದಂತೆ ಪೂರ್ತಿ ಪುಟ ತುಂಬಿಸಿದ್ದರು, ನಾನು ಅವನತ್ತ ತಿರುಗಿ , ಏನ್ರಿ ಈಗ ನಾನು ಇದನೆಲ್ಲ ಓದಬೇಕಾ? ಅಂದೆ, ಅದಕ್ಕೆ ಆತ ಅದೆಲ್ಲ ಬೇಡ ಸರ್, ಮೊದಲ ಪುಟದಲ್ಲಿ ಒಂದು ಪ್ರಶ್ನೆಯಿದೆ ನೋಡಿ ಎಂದ.

ಆ ಪ್ರಶ್ನೆ “What does it take to get to Heaven?”

ಅವನು ನನ್ನತ್ತ ತಿರುಗಿ ಹೇಳಿ ಸರ್ ಹೇಗೆ ಸ್ವರ್ಗಕ್ಕೆ ಹೋಗಬಹುದು? ಅಂದ.
ನಾನು ತಲೆ ಕೆರೆದು ಕೊಂಡು ಹೇಳಿದೆ , “ಒಳ್ಳೆ ಕೆಲಸ ಮಾಡಿ , ಎಲ್ಲರಿಗೂ ಒಳ್ಳೆಯದನ್ನೇ ಹಾರೈಸಿ, ಇಷ್ಟು ಸಾಕು ಸೀದಾ ಅಲ್ಲಿಗೆ ಹೋಗ್ತಿರಾ”.

ಅವನು “ನೀವು ನಿಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲವೇ” ಅಂದ ,ನಾನು “ಯಾಕ್ರೀ ನೀವ್ ಮಾಡಿಲ್ವಾ?” ಅಂದೆ. “ಮಾಡಿದ್ದೀನಿ ಸರ್ , ನಾವು ಮನುಷ್ಯರೆಲ್ಲ ಪಾಪಿಗಳು ಬರಿ ಪಾಪ ಕಾರ್ಯವನ್ನೇ ಮಾಡುತ್ತವೆ, ಈ ನಮ್ಮ ಪಾಪ ಕಾರ್ಯಗಳಿಂದ ನಮಗೆ ಸ್ವರ್ಗ ಪ್ರಾಪ್ತಿಯಾಗಬೇಕೆಂದರೆ ಇರುವುದು ಒಂದೇ ದಾರಿ ಅದು , ಈ ಲೋಕದಲ್ಲಿ ತನ್ನ ಮಕ್ಕಳಿಗೆ ಸ್ವರ್ಗ ಪ್ರಾಪ್ತಿ ಮಾಡಿಸಲು ಹುಟ್ಟಿ ಬಂದು ತನ್ನ ದೇಹವನ್ನು ನಮಗೋಸ್ಕರ ತ್ಯಾಗ ಮಾಡಿದ ಜೀಸಸ್ ಅನ್ನು ನಂಬಿದರೆ ಮಾತ್ರ ಸಾಧ್ಯ”.

ನಾ ಕೇಳಿದೆ “ಅಂದ್ರೆ , ಈಗ ನಾನು ಸ್ವರ್ಗಕ್ಕೆ ಹೋಗಬೇಕು ಅಂದ್ರೆ ಜೀಸಸ್ ಅನ್ನು ನಂಬಲೆಬೇಕೆ?”, ಅದಕ್ಕೆ ಅವನು ಅದು ನಿಮಗೆ ಬಿಟ್ಟಿದ್ದು ಸರ್ ಅಂದ, ಮತ್ತೆ ಮುಂದುವರೆದು ಈ ಜಗತ್ತಿನಲ್ಲಿ ಬೈಬಲ್ ಒಂದೇ ಸತ್ಯ, ಅದು ಮಾತ್ರ ಸತ್ಯ ಅಂದ ಮೇಲೆ ಉಳಿದವೆಲ್ಲ ಸುಳ್ಳು ಅಂತಾಗುತ್ತದೆ, ಹಾಗೆ ದೇವರು ನಮ್ಮ ಪಾಪ ಕಾರ್ಯಗಳನ್ನು ತೊಳೆಯಲು ಒಮ್ಮೆ ಮಾತ್ರ ಬರುತ್ತಾನೆ ಅಂದ.
ಆದಕ್ಕೆ ನಾನು , ” ಜೀಸಸ್ ಬಹಳ ಗ್ರೇಟು ಅವನು ನಮ್ಮನ್ತಹವರಿಗೊಸ್ಕರ ಒಮ್ಮೆ ಹುಟ್ಟಿ ಬಂದ , ಆದರೆ ನಮ್ಮ ದೇವರು ಯುಗ ಯುಗಗಳಲ್ಲಿ ನಮಗೋಸ್ಕರ ಹುಟ್ಟಿ ಬರುತ್ತಲೇ ಇರುತ್ತಾರೆ” ಅಂದೆ.
ಅನ್ನುವಷ್ಟರಲ್ಲಿ ಅವನು ಮಧ್ಯ ಏನೋ ಹೇಳ ಹೊರಟ ತಡೆದು ಹೇಳಿದೆ , ಇಷ್ಟೊತ್ತು ನೀವು ಬೈಬಲ್ ಬಗ್ಗೆ ಹೇಳಿದ್ರಿ ನಾನು ಕೇಳಿದೆ , ಈಗ ನಾನು ಹೇಳುತ್ತೇನೆ ನೀವು ಕೇಳಿ ಅಂತ ಮುಂದುವರೆಸಿದೆ,

“ಬೈಬಲ್ ನಿಮಗಿಷ್ಟವಾದರೆ ಒಳ್ಳೆಯದು ಆದರೆ ಬೇರೆ ಧರ್ಮ ಗ್ರಂಥಗಳೆಲ್ಲ ಸುಳ್ಳು ಅಂತ ಯಾಕ್ರೀ ಹೇಳ್ತಿರಾ? ನಿಮಗೆ ಬೈಬಲ್ ಹೆಚ್ಚು.ನನಗೆ ನನ್ನ ಭಗವದ್ಗೀತೆ,ಮುಸಲ್ಮನನಿಗೆ ಕುರಾನ್,ಸಿಕ್ಖರಿಗೆ ಗ್ರಂಥ ಸಾಹೀಬ್. ನಿಮಗೆ ಕ್ರೈಸ್ತನಾಗಿರಲು ಹೇಗೆ ಸ್ವತಂತ್ರವಿದೆಯೋ, ಹಾಗೂ ನಿಮಗೆ ನಿಮ್ಮ ಧರ್ಮದ ಮೇಲೆ ಎಷ್ಟು ಪ್ರೀತಿ ಇದೆಯೋ , ಎಲ್ಲರಿಗೂ ಅವರವರ ಧರ್ಮದಲ್ಲಿ ಅಷ್ಟೇ ಪ್ರೀತಿ,ನಂಬಿಕೆ ಇರುತ್ತದೆ , ಆ ನಂಬಿಕೆಯನ್ನು ಪ್ರಶ್ನಿಸಬೇಡಿ, ಅದೇನೋ ಸತ್ತ ಮೇಲೆ ಹೋಗೋ ಸ್ವರ್ಗದ ಬಗ್ಗೆ ಮಾತಾಡುತ್ತ , ಬದುಕಿರುವವರನ್ನು ಧರ್ಮದ ಸಂಕೋಲೆಯಲ್ಲಿ ಸಿಕ್ಕಿಸಿ ಇಲ್ಲಿ ನರಕ ಸೃಷ್ಟಿ ಮಾಡಬೇಡಿ” ಅಂತ ಹೇಳಿ ಕೈಯಲ್ಲಿದ್ದ ರಾಮನವಮಿಯ ಪ್ರಸಾದವನ್ನು ಕೊಟ್ಟು ಅವನನ್ನು ಬೀಳ್ಕೊಟ್ಟೆ.

ಅವನು ಹೋದ ನಂತರ ಗೆಳೆಯ ಕಾರ್ತಿಕ್ ಕೇಳಿದ , “ಅಲ್ಲ ಗುರು ಅವನೇನೋ ಕೆಲ್ಸಕ್ಕೆ ಬಾರದ ವಿಷಯ ಹೇಳ್ತಾ ಇದ್ರೆ ನೀನ್ ಕೇಳ್ತಾ ಇದ್ಯಲ್ಲ”
ನಾ ಹೇಳಿದೆ ” ನೋಡಪ್ಪ , ಅವನು ಹೇಗೆ ನಮ್ಮ ತಲೆ ಸವರಿ ಕಿವಿಗೆ ಹೂವಿಡಲು ಬಂದನೋ, ನಾನು ಅಷ್ಟೇ ನೀಟಾಗಿ ಅವನ ತಲೆ ಸವರಿ ಪ್ರೀತಿಯಿಂದ ಆ ಹೂವನ್ನು ಅವನ ಕೈಗೆ ಕೊಟ್ಟು ಬಂದೆ, ಅಷ್ಟೇ”

ಈ ಎಲ್ಲ ಪ್ರಹಸನ ಮುಗಿದ ಮೇಲೆ ನನ್ನೊಳಗೆ ನಾನು ಕೇಳಿಕೊಂಡ ಪ್ರಶ್ನೆ “ಮಂಗಳೂರಿನಲ್ಲಿ ಚರ್ಚ್ ಮೇಲೆ ನಡೆದ ದಾಳಿ ಸುಮ್ಮನೆ ಆಗಿರಲಿಕ್ಕಿಲ್ಲ ”

07/06/2010

ಭಾರತ – ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 3:01 ಅಪರಾಹ್ನ

ಹೌದು!! ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

‘ಶೀತಲ ಸಮರ’ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.

ಮುಂಬೈ ಮಾರಣ ಹೋಮದ ನಂತರ ಭಾರತ – ಪಾಕಿಸ್ತಾನದ ನಡುವೆ ಯುದ್ದ ಭೀತಿ ಶುರುವಾಗಿದೆಯಲ್ಲ (!), ಯುದ್ಧ ನಡೆದರೆ ಹೀಗಾಗಬಹುದು!!

ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)

ಭಾರತದ ಟೆಕ್ನಾಲಜಿ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!

ಸೈನ್ಯವು ‘ರಾಷ್ಟ್ರಪತಿ’ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು ‘ಕ್ಯಾಬಿನೆಟ್’ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕ ಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು ‘ಸಭಾತ್ಯಾಗ’ ಹಾಗೂ ‘ಗದ್ದಲವೆಬ್ಬಿಸುತ್ತಾರೆ’. ಲೋಕ ಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.
ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.

ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.

ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಹ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.

ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ Eye-wink

ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ ‘Made in China’ ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು ‘Made in USA’ ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.

ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.

ಈ ನಡುವೆ ಪಾಕಿಗಳು ‘ಕಳ್ಳ ಸಾಗಣೆ’ಯಲ್ಲಿ ತಂದ ‘Made in USA’ ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ Eye-wink

ಗುರಿ : ರಷ್ಯಾ !!!

ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.

ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.

ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!

– ರಾಕೇಶ್ ಶೆಟ್ಟಿ Smiling

(ಇದನ್ನ ಬರೆದು ೧ ವರ್ಷ ಆಗಿರಬೇಕು,ಮತ್ತೊಮ್ಮೆ ಈ ಬ್ಲಾಗ್ ಅಲ್ಲಿ  ಪೋಸ್ಟ್ ಮಾಡ್ತಾ ಇದ್ದೀನಿ)

29/05/2010

೧೯೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು ‘ಬದುಕಿದ್ದರಾ!?’

Filed under: ಮರೆತು ಮರೆಯಾದ ವೀರರು — ರಾಕೇಶ್ ಶೆಟ್ಟಿ @ 5:49 ಅಪರಾಹ್ನ

ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು  ‘ಮಹಾತ್ಮ ಗಾಂಧಿಜಿ’ಯವರನ್ನು.ಮಹಾತ್ಮರ ಸಲಹೆಯಂತೆ ‘ದೇಶ ಬಂಧು’ ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦  ಜನರ  ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.

ಬೋಸರು ೧೮೯೭ರ ಜನವರಿ ೨೩ ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ ೪ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

೧೯೩೮ ರಲ್ಲಿ ನಡೆದ ೫೧ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.೧೯೩೯ರಲ್ಲಿ  ಮತ್ತೊಮ್ಮೆ  ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ‘ಪಟ್ಟಾಭಿ ಸೀತಾರಾಮಯ್ಯ’ ಹಾಗೂ ‘ಸುಭಾಷ್’ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.

ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ “ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು” ಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ  ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ‘ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.

ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು ೧೯೪೧ ರಲ್ಲಿ , ಬ್ರಿಟಿಷ್ ಸರ್ಕಾರ ೧೧ನೆ  ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.ಹಾಗೆ ಗೃಹ ಬಂಧನದಲ್ಲಿರುವಾಗಲೇ ಸುಭಾಷರು ಯಾರು ಊಹಿಸದ ಯೋಜನೆ ಮಾಡಿಬಿಟ್ಟಿದ್ದರು.ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.

ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ‘ಐ.ಎನ್.ಎ’ ಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .

ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು  ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು    ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ  ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ  “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!” ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.

೧೯೪೩ರ ಅಕ್ಟೋಬರ್ ೨೩ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ‘ಜರ್ಮನಿ,ಜಪಾನ್,ಚೀನಾ,ಸಿಂಗಾಪುರ’ ಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ  ಸುಭಾಷರು ಅಧಿಕೃತವಾಗಿ ‘ಮಿತ್ರ ಕೂಟ’ಗಳ (ಅದೇಕೆ ‘ನಮ್ಮ’ ಇತಿಹಾಸದಲ್ಲೂ ಇವರು ‘ಮಿತ್ರ’ರೋ?) ಮೇಲೆ ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ  ‘ಐ.ಎನ್.ಎ’ ಅಭಿಯಾನ.

ಸುಭಾಷರು ‘ಐ.ಎನ್.ಎ’ ಸ್ಥಾಪಿಸಿದರು ಅಂತಲೇ ಓದಿಕೊಂಡು ಬಂದವರಿಗೆ, ಬಹುಷಃ ಈ ‘ಐ.ಎನ್.ಎ’ಯನ್ನು ಹುಟ್ಟು ಹಾಕಿದ್ದು ಮತ್ತೊಬ್ಬ ಹಿರಿಯ ಕ್ರಾಂತಿಕಾರೀ ‘ರಾಸ್ ಬಿಹಾರಿ ಬೋಸ್’ ಎಂಬುದು ತಿಳಿದಿರಲಿಕ್ಕಿಲ್ಲ. ಸುಭಾಷರು ಸ್ಥಾಪಿಸಿದ್ದು ‘ಇಂಡಿಯಾ ಲಿಜಾನ್’ ಅನ್ನುವ ಸಂಘಟನೆ. ರಾಸ್ ಬಿಹಾರಿ ಬೋಸರು ನಂತರ ಸುಭಾಷರ ಸುಪರ್ಧಿಗೆ ‘ಐ.ಎನ್.ಎ’ ಅನ್ನು ಹಸ್ತಾಂತರಿಸಿದರು. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಜಪಾನಿ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು.ಸುಭಾಷರು , ಟೋಜೋನೊಂದಿಗೆ ಮಾತಾಡಿ ಅವೆರಡನ್ನು ‘ಐ.ಎನ್.ಎ’ ಸುಪರ್ದಿಗೆ ತೆಗೆದುಕೊಂಡು ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.

ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ‘ಐ.ಎನ್.ಎ’ ಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ‘ಇಂಫಾಲ್’ ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ  ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು ೧೯೪೫ರ ಆಗುಸ್ತ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು (!) ಅನ್ನುವ ಸುದ್ದಿಗಳು ಬಂದವು ಬಹಳಷ್ಟು ಐ.ಎನ್ ಎ ಸೈನಿಕರನ್ನು  ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ  ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನಡೆದ ‘ನೌಕ ದಳದ’ ಬಂಡಾಯ (ಅದಕ್ಕೂ ನೇತಾಜಿಯವರ ಐ .ಎನ್.ಎ ಪರೋಕ್ಷ ಕಾರಣವೆಂದರು ತಪ್ಪಿಲ್ಲ) ಬ್ರಿಟಿಷರಿಗೆ ಚರಮ ಗೀತೆಯಾಯಿತು.

ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ ೧೯೪೭ರ ಆಗಸ್ಟ್ನಲ್ಲಿ  ಇಲ್ಲಿಂದ ತೊಲಗಿದರು.ಭಾರತ ಸ್ವತಂತ್ರವಾಯಿತು.ಅವರೇನೋ ತೊಲಗಿದರು.ಭಾರತ ಸ್ವತಂತ್ರವು ಆಯಿತು,ಆದರೆ ಜನರನ್ನು ಬಹು ಕಾಲ ಕಾಡಿದ ಪ್ರಶ್ನೆ ಬ್ರಿಟಿಷರ ನಿದ್ದೆಗೆಡಿಸಿದ ಸುಭಾಷರು ‘ಬದುಕಿದ್ದಾರಾ!?’ ಬದುಕಿದ್ದರೆ ಎಲ್ಲಿದ್ದರು?ಸೆರೆಯಲ್ಲಿದ್ದರ? ಇದ್ದರೆ ಯಾರ ಸೆರೆಯಲ್ಲಿದ್ದರು? ಸ್ವತಂತ್ರ ಭಾರತದಲ್ಲಿ ಅಜ್ಞಾತರಾಗಿ ಬದುಕಿದ್ದರ? ಹಾಗೆ ಬದುಕುವಂತೆ ಮಾಡಿದ್ದು ಯಾರು?ಯಾಕೆ ಅವರ ಸಾವಿನ ಬಗ್ಗೆ ಸರ್ಕಾರಗಳಿಗೆ ಅಸಡ್ಡೆ? ಪ್ರಶ್ನೆಗಳು ಸಾವಿರಾರು ,ಆದರೆ ಉತ್ತರ ಕೊಡುವವರು ಯಾರು?

ಅಂದಿಗೆ ಹಿಟ್ಲರ್ ಮಣ್ಣಾಗಿದ್ದ,ಜಪಾನ್ ಸೋತು ಶರಣಾಯಿತು.ಸುಭಾಷರು ಗುಪ್ತ ಸಭೆಯೊಂದನ್ನು ನಡೆಸಿ ,ಜಪಾನಿ ಅಧಿಕಾರಿಗಳು ಹತ್ತಿದ್ದ  ವಿಮಾನವನ್ನ ಹತ್ತಿದರು,ಅವರೊಂದಿಗೆ ಇದ್ದ ಮತ್ತೊಬ್ಬ ‘ಐ.ಎನ್.ಎ’ ಅಧಿಕಾರಿಯ ಹೆಸರು ‘ಹಬಿಬುರ್ ರಹಮಾನ್’.ಮುಂದೆ ತೈಪೆಯಲ್ಲಿ ಆ ವಿಮಾನ ಅಪಘಾತಕ್ಕಿಡಾಗಿ ಸುಭಾಷರು ಮರಣ ಹೊಂದಿದರು ಅಂತ ತಾವು ಸಾಯುವವರೆಗೆ ಸಾಧಿಸುತ್ತಲೇ ಬಂದವರು ಇದೆ ರಹಮಾನ್ ಅವರು.ಹಾಗೆ ಅವರು ಹೇಳಿದ್ದ?ಅಥವಾ ಅವರಿಂದ ಹೇಳಿಸಲಾಯಿತ? ಗೊತ್ತಿಲ್ಲ.

ಸ್ವತಂತ್ರ ಬಂದು ಹತ್ತು ವರ್ಷಗಳ ನಂತರ ನಮ್ಮ ಮೊದಲ ಪ್ರಧಾನಿಯವರಿಗೆ ಜ್ಞಾನೋದಯವಾಗಿ ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ‘ಷಾ ನವಾಜ್ ಸಮಿತಿ’ ರಚಿಸಿದರು.ಆ ಸಮಿತಿಯವರಿಗೆ ಅದೇನು ಬೇರೆ ಕೆಲಸವಿತ್ತೋ , ದಿಡೀರ್ ಅಂತ ವರದಿ ಒಪ್ಪಿಸಿಯೇ ಬಿಟ್ಟರು.ಮುಂದೆ ‘ಖೊಸ್ಲಾ ಸಮಿತಿ’ ಎಲ್ಲ ಹೇಳಿದ್ದು ಒಂದೇ ಅವರು ವಿಮಾನಪಾಘತದಲ್ಲಿ ಮಡಿದರು ಅಂತ.ಖುದ್ದು ತೈಪೆ ಸರ್ಕಾರವೇ ಆ ದಿನ ಯಾವ ವಿಮಾನವು ಹಾರಿಲ್ಲ ಅಂದರೆ ಕೇಳುವವರು ಯಾರು ಇರಲಿಲ್ಲ.ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ‘ಮುಖರ್ಜಿ ಸಮಿತಿ’ ಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ ,ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು. ಯಾವ್ದು ನಿಜ?ಗೊತ್ತಿಲ್ಲ.

ನೇತಾಜಿ ನಿಗೂಡ ಅಂತ್ಯವನ್ನು  ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ(!) ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ಹಾಗೆ ಹಿಂದುಸ್ತಾನ್ ಟೈಮ್ಸ್ .ಕಾಂ ನಡೆಸಿದ ತನಿಖೆಯಲ್ಲಿ ಹೇಳುವುದೇನೆಂದರೆ ನೇತಾಜಿ ಅಂದು ಸಾಯಲಿಲ್ಲ ಮರಳಿ ಭಾರತಕ್ಕೆ ಬಂದು ‘ಭಗವಾನ್ ಜಿ’ ಯಾಗಿ ಉತ್ತರ ಭಾರತದಲ್ಲಿ ಅಜ್ಞಾತರಾಗಿ ಬದುಕಿ ೧೯೮೦ರ ದಶಕದಲ್ಲಿ ಮಡಿದರು ಅಂತ.ಇದು ನಿಜವಾದರೆ ಹಾಗೆ ಅವರು  ಅಜ್ಞಾತವಾಸ ಮಾಡಬೇಕಾಗಿ ಬಂದಿದ್ದರು ಹೇಗೆ?

ಈ ಎಲ್ಲದರ ಹಿಂದೆ ಯಾವುದೋ ಅಂತರಾಷ್ಟ್ರೀಯ ಪಿತೂರಿ ಇತ್ತ?ಯಾಕೆ ಅವರ ಸಾವಿನ ರಹಸ್ಯ ಬಯಲಾದರೆ ಇತರ ದೇಶಗಳ ಜೊತೆ ನಮ್ಮ ಸಂಬಂಧ ಹದಗೆಡುತ್ತದೆ? ಭಗವಾನ್ ಜಿ ಕೆಲವೊಂದು ಸಂಧರ್ಭಗಳಲ್ಲಿ ಅವರ ಸಹವರ್ತಿಗಳೊಂದಿಗೆ ಮಾತಾಡುವಾಗ ‘ಹಿಂದೆ ಕೆಲ  ಜನಗಳಿಂದಾದ ಅನುಭವದಿಂದ ಪಾಠ ಕಲಿತಿದ್ದೇನೆ’ ಅನ್ನುವ ಅರ್ಥ ಬರುವಂತೆ ಮಾತಡಿದ್ದಾದರೂ ಯಾಕೆ? ನೇತಾಜಿಯವರ ಸಹವರ್ತಿಗಳೇ,ಭಗವಾನ್ ಜಿಯವರ ಸಹವರ್ತಿಗಳಾಗಿದ್ದಾದರೂ ಹೇಗೆ?

ಅಂದು ಹಿಟ್ಲರ್ ಮಣ್ಣಾಗದೆ ಇದ್ದಿದ್ದರೆ ,ಜಪಾನ್ ಸೋಲದೆ ಇದ್ದಿದ್ದರೆ, ಐ.ಎನ್ .ಎ ದಿಗ್ವಿಜಯ ಸಾಧಿಸಿದ್ದರೆ ಭಾರತ ಸುಭಾಷರನ್ನು ಮಿಸ್ ಮಾಡ್ಕೋತ ಇರ್ಲಿಲ್ಲ . ಆದರೆ ವಿಧಿಯಾಟ ಬೇರೆಯಾಗಿತ್ತು.ಸುಭಾಷರನ್ನು ಮತ್ತೆ ಕಾಣುವ ಭಾಗ್ಯ ನಮಗೆ ಸಿಗಲೇ ಇಲ್ಲ   😦

ನೇತಾಜಿಯವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದರ ಮೂಲಕವಾದರೂ ಆ ಚೇತನಕ್ಕೆ ಚಿರ ಶಾಂತಿಯನ್ನು ಕೋರೋಣ.

ಜೈ ಹಿಂದ್

ಚಿತ್ರ ಕೃಪೆ :topnews.in

26/05/2010

ಇದು ‘ರೈ’ ಟ್ ‘ಕನಸು’

Filed under: ಅವಿಭಾಗೀಕೃತ — ರಾಕೇಶ್ ಶೆಟ್ಟಿ @ 6:06 ಅಪರಾಹ್ನ

ಡೆನ್ನಾನ  ಡೆನ್ನಾನ
ತುಳುನಾಡ ಸೀಮೆಡು
ರಮರೊಟ್ಟು ಗ್ರಾಮೋಡು
ಗುಡ್ಡಾದ ಭೂತ ಉಂಡುಗೆ…

ಅನ್ನೋ ಹಾಡಿನೊಂದಿಗೆ ದೂರದರ್ಶನದಲ್ಲಿ ‘ಗುಡ್ಡದ ಭೂತ’ ಅನ್ನೋ ಧಾರವಾಹಿ ಬರ್ತಿತ್ತು . ಆ ಧಾರವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು,ಅಲ್ಲಿಂದ ಕನ್ನಡ ಹಿರಿತೆರೆ ಮೇಲೆ ಕಾಣಿಸಿ,ಇಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪಾತ್ರಗಳನ್ನ ನೀಡದೆ ಇದ್ದಾಗ,’ನಾನ್ ತಮಿಳ್ನಾಡ್ ಕಡೆ ಹೊರಟೆ’ ಅಂತೇಳಿ ಹೋಗಿ ತಮ್ಮ ದೈತ್ಯ ಪ್ರತಿಭೆಯಿಂದಲೇ ತಮಿಳು,ತೆಲುಗು,ಮಲಯಾಳಂ,ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಮನೆಮಾತಾಗಿ,ದಕ್ಷಿಣ ಭಾರತದ ಚಿತ್ರ ರಂಗದಲ್ಲೇ ಬೇಡಿಕೆಯ ನಟನಾಗಿ ಬೆಳೆದು ನಿಂತವರು ನಮ್ಮ ‘ಪ್ರಕಾಶ್ ರೈ’!

ನಟ ಪ್ರಕಾಶ್ ರೈ, ನಿರ್ದೇಶಕ ಪ್ರಕಾಶ್ ರೈ ಆಗಿ ಕನ್ನಡ ಚಿತ್ರ ಮಾಡ್ತಾ ಇದ್ದೀನಿ ಅಂದಾಗ ಸಹಜವಾಗೇ ನಿರೀಕ್ಷೆಯಿತ್ತು.ಒಂದೇ ಮಾತಿನಲ್ಲಿ ಹೇಳುವುದಾದರೆ ‘ರೈ’ ನಿರೀಕ್ಷೆಯನ್ನ ಹುಸಿಗೊಳಿಸಿಲ್ಲ!

ಚಿತ್ರದ ಹೆಸರು ನೋಡಿ ಡಾಕ್ಯುಮೆಂಟರಿ ತರ ಇರಬಹುದು ಅಂದುಕೊಂಡು,ಗೆಳೆಯನಿಗೆ ಹೇಳ್ದೆ ‘ಲೇ,ಸೆಕೆಂಡ್ ಶೋ ಬೇಡ್ವೋ ನಿದ್ರೆ ಬಂದ್ರು ಬರಬಹುದು’ ಅಂತ,ಆದ್ರೆ ಮನೆ ಮಂದಿಯೊಂದಿಗೆ ಕುಳಿತು ನೋಡ ಬಹುದಾದ ಒಂದೊಳ್ಳೆ ಸಿನಿಮಾವನ್ನ ಮಾಡಿ ಕೊಟ್ಟಿದ್ದಾರೆ ರೈ. ಅಪ್ಪ-ಮಗಳ ಅವಿನಾಭಾವ ಸಂಬಂಧದ ಸುತ್ತ ತಿರುಗುವ ಚಿತ್ರ,ಯಾವ ಹಂತದಲ್ಲೂ ಬೋರ್ ಅನ್ನಿಸುವುದಿಲ್ಲ,ಮಧ್ಯೆ ಮಧ್ಯೆ ಬಹಳ ನಗಿಸುತ್ತಾರೆ.ಹಂಸಲೇಖ ಬಹಳ ದಿನಗಳ ನಂತರ ಒಳ್ಳೆ ಸಾಹಿತ್ಯ-ಸಂಗೀತ ನೀಡಿದ್ದಾರೆ, ಮಾಮೂಲಿನಂತೆ ಬಾಲಿವುಡ್ ಗಾಯಕರ ದಂಡೆ ಬಂದು ಹಾಡಿ ಹೋಗಿದೆ 😦

ಬಹಳ ದಿನದ ನಂತರ ಕಾಣಿಸಿಕೊಂಡ ಸಿತಾರ ಗಮನ ಸೆಳೆಯುತ್ತಾರೆ, ಅಚ್ಯುತ ,ಪ್ರಕಾಶ ರೈ,ಅಮೂಲ್ಯ,ರಮೇಶ್ ಅರವಿಂದ್ ಎಲ್ಲರ ಅಭಿನಯವು ಮಸ್ತ್ ! ಒಟ್ಟಿನಲ್ಲಿ ಒಂದೊಳ್ಳೆ ಕನ್ನಡ ಸಿನೆಮ ನೋಡಿದ ಖುಷಿ ಅಂತು ಆಯ್ತು.

(ಚಿತ್ರ ಕೃಪೆ: http://myagic.files.wordpress.com)

21/05/2010

ವೋಟ್ ಬ್ಯಾಂಕ್ ಜಪ – ಕಾನೂನು ಸುವ್ಯವಸ್ಥೆ ನೆಪ !

Filed under: ಅವಿಭಾಗೀಕೃತ — ರಾಕೇಶ್ ಶೆಟ್ಟಿ @ 7:11 ಅಪರಾಹ್ನ
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.’ಇಂದಿರಾ ಗಾಂಧಿ!’ ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು.ಅವರ ಬಗ್ಗೆ ಹಿಂದೊಮ್ಮೆ ಬರೆದಿದ್ದೇನೆ.ಆದರೆ ಅಲ್ಲಿ ಮರೆತಿದ್ದ ಒಂದು ವಿಷಯ ಇವತ್ತಿನ ಪರಿಸ್ಥಿತಿಗೆ ನೆನಪಾಯಿತು.

ಅವನು ಮಕ್ಬೂಲ್ ಭಟ್!, JKLF ಸ್ಥಾಪಕರಲ್ಲೊಬ್ಬ.ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಈ ಕಾಶ್ಮೀರಿ ಮುಸಲ್ಮಾನನ್ನ ಬಿಡಿಸಿಕೊಳ್ಳಲು, ಇಂಗ್ಲೆಂಡಿನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ರವೀಂದ್ರ ಮ್ಹಾತ್ರೆಯವರನ್ನ ಅಪಹರಿಸಿದ ಉಗ್ರಗಾಮಿಗಳು, ಅವನ ಬಿಡುಗಡೆಯ ಷರತ್ತನ್ನ ಮುಂದಿಟ್ಟರು.ಇಂದಿರಮ್ಮ ಅಲ್ಲದೆ ಬೇರೆ ಯಾರಾದರು ಇದ್ದಿದ್ದರೆ ಬಿಡುತಿದ್ದರೆನೋ!?, ಆದ್ರೆ ಆಕೆ ಬಗ್ಗಲಿಲ್ಲ,ಕ್ಷಮಾಪಣೆ ನೀಡುವಂತೆ ಕೋರಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಬಳಿ ಹೋಗಿದ್ದ ಅರ್ಜಿ ತಿರಸ್ಕ್ರುತವಾಗುವಂತೆ ನೋಡಿಕೊಂಡರು,ಅವನನ್ನ ಗಲ್ಲಿಗೇರಿಸಿ ಇಂತವಕ್ಕೆಲ್ಲ ಭಾರತ ಬಗ್ಗುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದರು ಇಂದಿರಮ್ಮ.

ಇದು ನಡೆದಿದ್ದು ೧೯೮೪ ರಲ್ಲಿ,ನೇಣಿಗೆರಿಸಲ್ಪಟ್ಟವನು ಒಬ್ಬ ಕಾಶ್ಮೀರಿ ಮುಸಲ್ಮಾನ,ಕಾಶ್ಮೀರ ಹೊತ್ತಿ ಉರಿಯುತಿದ್ದ ಆ ದಿನಗಳಲ್ಲೇ ಯಾವ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಅವನಿಗೆ ಶಿಕ್ಷೆ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡಲಿಲ್ಲ.ಆದರೆ ಈಗ ಅಫ್ಜಲ್ ಗುರುವಿನ ವಿಷಯದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಯ ನೆಪ ಬಂದು ಕೂತಿದೆ!

ಯಾರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಈ ಜನ.ಕಾನೂನು ಸುವ್ಯವಸ್ಥೆಯನ್ನು ಕಾಪಡಲಾಗದ ಸರ್ಕಾರವಾದರು ಏಕಿರಬೇಕು ಅಧಿಕಾರದಲ್ಲಿ?,ಅವನನ್ನ ಜೀವಂತವಿಟ್ಟು ಮತ್ತಿನ್ಯಾವ ಅಪಹರಣದ ನಾಟಕ ಶುರುವಾಗಿ ಇದೆ ‘ಕಾನೂನು ಸುವ್ಯವಸ್ಥೆಯ’ ನೆಪ ಹೇಳಿ ಬಿಡುಗಡೆ ಮಾಡಲು ಕಾದಿದ್ದಾರೆ ಇವರು.ನಂಗೆ ಒಮ್ಮೊಮ್ಮೆ ಅನ್ನಿಸುವುದು ಈಗ ಇಷ್ಟೆಲ್ಲಾ logic ಮಾತಾಡೋ ರಾಜಕಾರಣಿಗಳಲ್ಲಿ ಒಂದಿಬ್ಬರು ಯಾರಾದರು ಅವತ್ತಿನ ದಾಳಿಯಲ್ಲಿ ಬಲಿಯಾಗಿದ್ದರೆ ಆಗ ಇವರಿಗೆ ಬಲಿದಾನಗೈದವರ ಕುಟುಂಬದ ಅಳಲು ಅರ್ಥವಾಗುತ್ತಿತ್ತು,ಆದರೆ ನಮ್ಮ ಭದ್ರತಾ ಪಡೆಯ ಜವಾನರು ಯಾವ ಜನ ಸೇವಕರನ್ನ ಉಳಿಸಲು ತಮ್ಮ ಎದೆಯೊಡ್ಡಿ ನಿಂತರೋ ಅಂತ ಜವಾನರ ಬಲಿದಾನಕ್ಕೆ ಅವಮಾನ ಮಾಡುತ್ತಿರುವ ಈ ಜನಸೇವಕರನ್ನ ಏನು ಮಾಡೋಣ?
ಅಂದು ಮುಂಬೈ ದಾಳಿಯಾದಾಗ ಒಂದು ಸಂದೇಶ ಹರಿದಾಡಿತ್ತು ನೆನಪಿದೆಯಾ?

‘ಬೋಟಿನಲ್ಲಿ ಬಂದವರ ಬಿಡಿ,ವೋಟಿನಲ್ಲಿ ಬಂದವರ ನೋಡಿ’

ಮುಂಬೈ ಮಾರಣಹೋಮದ ನಂತರ ತೋರಿಸಿದ ಒಗ್ಗಟ್ಟನ್ನೇ ಈ ಪ್ರಕರಣದಲ್ಲೂ ಮುಸಲ್ಮಾನ ನಾಯಕರು ತೋರಿಸಬೇಕಿದೆ.ಯಾರು ಸಿಟ್ಟಿಗೇಳುತ್ತಾರೆ ಅನ್ನೋ ಭ್ರಮೆ ಸೃಷ್ಟಿಸಿಲಾಗುತ್ತಿದೆಯೋ ಆ ಸಮುದಾಯದ ಒಬ್ಬನೇ ನಾಯಕ ದೇಶ ದ್ರೋಹಿಗೆ ಶಿಕ್ಷೆಯಾದರೆ ನಮಗೆ ಸಂತೋಷ,ನಮ್ಮ ಹೆಸರಲ್ಲಿ ನೀವು ನಾಟಕ ಮಾಡುವುದನ್ನ ನಿಲ್ಲಿಸಿ ಅಂತ ಹೇಳುತ್ತಿಲ್ಲ ಅನ್ನುವುದೇ ನೋವಿನ ಸಂಗತಿ.
‘ಕಾನೂನು ಸುವ್ಯವಸ್ಥೆಯ ನೆಪ’ದಲ್ಲಿ ನಿಜವಾಗಿ ಈ ರಾಜಕಾರಣಿಗಳು,ಕೇಂದ್ರ ಸರಕಾರ ಮಾಡುತ್ತಿರುವುದು ‘ವೋಟ್ ಬ್ಯಾಂಕ್ ಜಪ’ ಅಷ್ಟೇ!,
(ಚಿತ್ರ ಕೃಪೆ :www.sodahead.com)

13/05/2010

ಕಾಸು – ಕುರ್ಚಿಯ ಖಾದಿಗಳ ನಡುವೆಯೊಬ್ಬ…

Filed under: ಪ್ರಚಲಿತ — ರಾಕೇಶ್ ಶೆಟ್ಟಿ @ 3:12 ಅಪರಾಹ್ನ

ಕುಮಾರಸ್ವಾಮಿ ಸರಕಾರವಿದ್ದಾಗ ರೇವಣ್ಣ,ಯಡ್ಯೂರಪ್ಪನವರ ಕಾಲದಲ್ಲಿ ಈಶ್ವರಪ್ಪ. ಇಬ್ಬರೂ ಅಬ್ಬರಿಸುತಿದ್ದಿದ್ದು ‘ಗುಂಡ್ಯ ಜಲ ವಿದ್ಯುತ್ ಯೋಜನೆ’ಯನ್ನ ಜಾರಿಗೆ ತಂದೆ ತರುತ್ತೇವೆ ಅಂತ.ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆಯೂ ಸಚಿವರಿಗೆ ಮೋಹವಿತ್ತು.BT (ಬಿಟ್ಟಿ?) ಬದನೇಕಾಯಿ ವಿಷಯದಲ್ಲಿ ಹೆಸರಿಗೆ ಕೃಷಿ ಸಚಿವರಾದರು ಸದಾ ಕಾಲ ಬ್ಯಾಟ್ ಹಿಡಿದು ಕ್ರಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಶರದ್ ಪವಾರ್ ಸಹ ಬಿ.ಟಿ  ಬದನೆ ಒಳ್ಳೇದು ಇರ್ಲಿ ಬಿಡಿ ಅಂದಿದ್ರು.ಮೊನ್ನೆ ಮೊನ್ನೆ ನಮ್ಮ ತಲೆ ಕೆಟ್ಟ ರಾಜ್ಯ ಸರ್ಕಾರ ಮೈಸೂರು-ಶಿವಮೊಗ್ಗದ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಾಗ, ಆಚಾರ್ಯ ಅವ್ರು ಹೇಳಿದ್ರಲ್ಲ ಗಣಿಗಾರಿಕೆಯನ್ನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಅಂತ, ಅದ್ಹೆಂಗೆ ಪರಿಸರಕ್ಕೆ ಹಾನಿಯಾಗದಂತೆ ಮಾಡೋದು ಅಂತ ಪುಣ್ಯಾತ್ಮ ಹೇಳಲಿಲ್ಲ, ಇವ್ರು ಗಣಿ ಅಗೆಯುವವರೆಗೂ ಇರೋ ಬರೋ ಕಾಡು-ಪ್ರಾಣಿ-ಪಕ್ಷಿಗಳನ್ನೆಲ್ಲ ತಮ್ಮ ತವರು ಕರಾವಳಿಯ ಕಡಲಿನಲ್ಲಿ ಇಡುತಿದ್ದರೆನೋ?  ಕುರ್ಚಿ ಸಿಗುತ್ತೆ ಅಂದ್ರೆ ವಿಧಾನ ಸೌಧದ ಕೆಳಗೂ ಅಗೆಯೋಕೆ ಬಿಡೋಕು ಸೈ  ಅನ್ನೋ ಈ ರಾಜಕಾರಣಿಗಳಿಗೆ common sense ಇಲ್ವಾ?

ಆದರೆ ಕಾಸು- ಕುರ್ಚಿಯ ಕನಸು ಕಾಣುವ ಖಾದಿಗಳ ನಡುವೆಯೊಬ್ಬ ಇತ್ತೀಚಿನ ದಿನಗಳಲ್ಲಿ  common sense ಇರುವಂತೆ,ಜನರ ಮನ ಅರಿತಂತೆ ವರ್ತಿಸುತಿದ್ದವ್ರು  ಕೇಂದ್ರ ಅರಣ್ಯ ಪರಿಸರ ಖಾತೆ ಸಚಿವ ‘ಜೈ ರಾಮ್ ರಮೇಶ್’.
ಅದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ವಿಷಯವಿರಬಹುದು,ಗುಂಡ್ಯ ಯೋಜನೆಯಿರಬಹುದು,ಬಿ.ಟಿ ಬದನೆಯ ವಿಷಯ ಇರಬಹುದು.ಪರಿಸರಕ್ಕೆ ಹಾನಿಕಾರಕವಾಗಿದ್ದ ಇವುಗಳನ್ನ ಜಾರಿಗೆ ತರುವಲ್ಲಿ ಯಾವ ಲಾಭಿಗೂ  ಮಣಿಯದೆ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.ಬಳ್ಳಾರಿ ಹಾಳಾಗಿರೋದು ಸಾಲೋದಿಲ್ಲ ಅಂತ, ಯಡ್ಡಿ ಸರ್ಕಾರ ರಕ್ಷಿತಾ ಅರಣ್ಯದಲ್ಲೂ  ಗಣಿಗಾರಿಕೆ ಮಾಡಲು ಅನುಮತಿ ಕೊಟ್ಟು, ಇದಕ್ಕೆ ಕೇಂದ್ರದ ಒಪ್ಪಿಗೆಯು ಇದೆ ಅಂದಾಗ ಗರಂ ಆಗಿ ಪ್ರತಿಕ್ರಿಯಿಸಿದ ಜೈ ರಾಮ್ ರಮೇಶ್, ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ತಪರಾಕಿ ಹಾಕಿದ್ದರು.

ತೀರ ಮೊನ್ನೆ ಮೊನ್ನೆ ಭೋಪಾಲ್ ಕಾನ್ವೊಕೇಷನ್ನಲ್ಲಿ ಗೌನ್ ಕಳಚಿ ಅದನ್ನ ಗುಲಾಮಗಿರಿಯ ಸಂಕೇತ ಅಂದಾಗಲು ಜನ ಖುಷಿ ಪಟ್ಟಿದ್ದರು, ಇಂತ  ಜೈ ರಾಮ್ ಚೈನಾಗೆ ಹೋಗಿ ತಮ್ಮ ಸಂಪುಟದ ಮತ್ತೊಬ್ಬ ದಕ್ಷ ‘ಚಿದಂಬರಂ’ ಅವರ ಸಚಿವಾಲಯದ ಕಾರ್ಯ ವೈಖರಿಯ ಬಗ್ಗೆ  common ಸೆನ್ಸ್ ಇಲ್ಲದವರಂತೆ ಮಾತಾಡಿದ್ದು ನೋಡಿ ಬೇಸರವಾಯಿತು.ಅವರನ್ನು ಕರೆಸಿ ಗದರಿಸಿ ಪ್ರಧಾನಿ  ಮತ್ತೆ ಇನ್ಯಾರು ಇಂತ ಕೆಲಸಕ್ಕೆ ಕೈ ಹಾಕಲು ಯೋಚಿಸುವಂತೆ ಮಾಡಿದ್ದಾರೆ.ಆದರೆ ಈ ವಿದ್ಯಮಾನಗಳಿಂದ ವಿಚಲಿತರಾಗಿ ರಾಜಿನಾಮೆ ನೀಡಲು ಹೊರಟಿದ್ದರು ಜೈ ರಾಮ್ ಅನ್ನೋ ಸುದ್ದಿ ಕೂಡ ಬಂದಿತ್ತು,ಅದನ್ನು ತಿರಸ್ಕರಿಸಿ ಪ್ರಧಾನಿ ಒಳ್ಳೆಯ ನಿರ್ಧಾರ ತಳೆದಿದ್ದಾರೆ. ಅದೇನೇನೋ ಕಂತ್ರಿ ಕೆಲಸ ಮಾಡಿ ಮಂತ್ರಿಗಳಾಗಿ ಮೂರು ಬಿಟ್ಟು ಕುರ್ಚಿ ಹಿಡಿದು ಕುಳಿತಿರುವ ಕೆಲಸಕ್ಕೆ ಬಾರದ ಮಂತ್ರಿಗಳ ನಡುವೆ , ಜನ ಪರ ನಿಲುವು ತಳೆಯುವ ಜೈ ರಾಮ್ ರಮೇಶ್ ಅಂತವರು ನಮಗಾಗಿ ಅಲ್ಲದಿದ್ದರೂ ‘ಪರಿಸರ’ ಖಾತೆಗಾಗಿಯಾದರು ಕುರ್ಚಿಯಲ್ಲಿ ಇರಬೇಕು .

(ಚಿತ್ರ ಕೃಪೆ : http://beta.thehindu.com)

09/04/2010

ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

Filed under: ಕನ್ನಡ — ರಾಕೇಶ್ ಶೆಟ್ಟಿ @ 5:59 ಅಪರಾಹ್ನ
‘ಇರಲಾರದೆ ಇರುವೆ ಬಿಟ್ಕೊಂಡ’ ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ.

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿಗೆ ಬಂದ ಈ ಆಸಾಮಿ, ಪ್ರತಿಷ್ಟಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು,ಜೇಬು-ಹೊಟ್ಟೆ ತುಂಬಿಸಿಕೊಂಡು , ಅದರ ಕೊಬ್ಬು ಜಾಸ್ತಿಯಾಗಿ My Love for South Indians ಅನ್ನೋ ಥರ್ಡ್ ರೇಟ್ ಲೇಖನ ಬರೆದಿದ್ದು ಅಲ್ಲದೆ, ಪುಣ್ಯಾತ್ಮ ಅದನ್ನ ಕಂಪೆನಿಯ ಮಿಂಚೆ ವಿಳಾಸದಲ್ಲಿ ತಿರುಪತಿ ಪ್ರಸಾದದಂತೆ ಹಂಚಿ ಸಿಕ್ಕಿ ಬೀಳಬಾರದಿದ್ದವರ ಕೈಗೆ ಸಿಕ್ಕಿ ಬಿದ್ದು, ಅವನು ಮಾಡಿದ ತಪ್ಪಿಗೆ ಕೆಲಸ ಕಳೆದು ಕೊಂಡಿದ್ದಾನೆ.

ಕೆಲಸ ಏನೋ ಕಳೆದು ಕೊಂಡ, ಆದರೆ ಈಗ ಮಾರ್ಕೆಟ್ನಲ್ಲಿ ಒಳ್ಳೆ openings ಇದೆ, ಸುಲಭವಾಗಿ ಒಳಗೆ ಸೇರಿಕೊಂಡರು ಸೇರಿಕೊಳ್ಳುತ್ತಾನೆ.ಅದೇ ಒಂದಿಷ್ಟು ದಿನ ಕೆಲಸವಿಲ್ಲದೇ ಮನೆಯಲ್ಲೇ ಇದ್ದ್ರೆ ಆಗ ಅವನ ಕೊಬ್ಬು ಕರಗಬಹುದೇನೋ?, ಅವನ ಅದೃಷ್ಟಕ್ಕೆ ಯಾರ ಕೈಗೂ ಸಿಕ್ಕಿ ಬಿದ್ದಿಲ್ಲ, ಬಿದ್ದರೆ ಅವನ ದಕ್ಷಿಣ ಭಾರತೀಯರ ಪ್ರೀತಿಗೆ ಒಂದಿಷ್ಟು ಪ್ರೇಮದ ಕಾಣಿಕೆ ಸಿಗುತಿತ್ತು.

ಹಿಂದೊಮ್ಮೆ ‘ಸ್ಯಾನ್ ಮಿತ್ರ’ ಅನ್ನೋ ಕೊಲ್ಕತ್ತದವ ಅಮೇರಿಕನ್ ಮೂಲದ ಕಂಪೆನಿಯಿಂದ ಇಂತದ್ದೆ ಕೆಲ್ಸಕ್ಕೆ ಕೈ ಹಾಕಿ, ಬೆಂಗಳೂರಿಂದ ಹೊರದಬ್ಬಿಸಿಕೊಂಡಿದ್ದ, ಆಮೇಲೆ ಮತ್ತಿನ್ನೊಂದು ಕಂಪೆನಿಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಉದ್ಯೋಗಿಯಿಂದಾಗಿ ಆ ಕಂಪೆನಿ ಕನ್ನಡ ಪರ ಹೋರಾಟಗಾರರ  ಆಕ್ರೋಶಕ್ಕೆ ತುತ್ತಾಗಿತ್ತು.

ಹೊಟ್ಟೆ ಪಾಡಿಗೆ ಅಂತ ಬೆಂಗಳೂರಿಗೆ ಬಂದವರು ತಾವು ಬಂದಿದ್ದರಿಂದಲೇ ಬೆಂಗಳೂರು ಬೆಳಕು ಕಾಣುತ್ತಿದೆ,ಉದ್ಧಾರ ಆಗ್ತಿದೆ ಅನ್ನೋ ಭ್ರಮೆಯಲ್ಲಿ ಇರುವಂತಿದೆ.ತಾವಿರುವ ಜಾಗದ ಸಂಸ್ಕೃತಿ,ಅಚಾರ,ವಿಚಾರ ,ಭಾಷೆಗೆ ಗೌರವ ನೀಡಿ ಬದುಕುವುದನ್ನ ಇವರು ಕಲಿಯಬೇಕಿದೆ.ಇಲ್ಲದಿದ್ದರೆ ಇಂತವರಿಗೆ ನಾವೇ ಖುದ್ದಾಗಿ ಕಲಿಸಬೇಕಿದೆ.

04/04/2010

ಕುಡ್ಲದ ಬನ್ಸ್ ಬೊಕ್ಕ ಬೆಚ್ಚ ಚಾ !

Filed under: ತುಳು — ರಾಕೇಶ್ ಶೆಟ್ಟಿ @ 4:55 ಅಪರಾಹ್ನ
ಈತ್ ಪೋರ್ತುಗು ಇಲ್ಲಾಡ್ ಇತ್ತಿತ್ತೆಡಾ ಪೂರಕಲ ಒಟ್ಟುಗೆ ಕುಲ್ಲುದು ಗಟ್ಟಿ ವೋನಸ್ ಮಂತ್ದು,ಚೂರು ಪಟ್ಟಂಗ ಪಾಡುದು ಚೋಚೊಂತೆ ;).
ಇತ್ತೇ ಬೆಂಗಳೂರುಡು ಈ ಕಂಪ್ಯೂಟರ್ದ ಎದುರುಡು ವೋರಿಯೇ ಕುಲ್ಲೊಂದು ೩ ದಿನತ ರಜೆನು ಹಾಲ್ ಮಂತುದು ಇಲ್ಲಾಗ್ ಪೊಂದಿಲೇಕ ಮಂತಿನ ಮ್ಯಾನೆಜರ್ಗ್ ನೆರೋನೊಂದು ಬರೆವೊಂದುಲ್ಲೇ.

ಇನಿ ಬೋಲ್ಪುಗು ಬೆಂಗಳೂರ್ದ ಮಲ್ಲೇಶ್ವರಮ್ಮ್ ಡ್ ‘ಬನ್ಸ್ ಬೊಕ್ಕ ಬೆಚ್ಚ ಚಾ’ ಪರಿನಾಯಗ್ ನೆನಪಾಯಿನ, ಇಲ್ಲಡ್ ಇತ್ತಿನಗಾ ಅಮ್ಮ ದಾದಾ ತಿಂಡಿ ಮಂತೆರ್ಡಲ ‘ದಿನ ದಾದಾ ತಿಂಡಿ ಅಂದ್ ಮನ್ಪುವರ್,ಯಂಕ್ ಬೋರ್ಚಿ ಈರೆ ತಿನ್ಲೆ’ ಅಂದು ಕಾಮೆಂಟ್ ಹಾಕುದು ಪೊಂದಿತ್ತೆ. ಆಂಡ ಇತ್ತೇ ಬೆಂಗಳೂರ್ಡು ವೋಟೆಲ್ದಾಯಡ ಮಿನಿ ಅಂಚ ಪಂಡೆಡ ‘ನಿಕ್ಕ್ ಇಷ್ಟ ಇತ್ತಂದ ತಿನ್ ಮಗ, ಇಜ್ಜಿಡ ಮನಿಪಂದೆ ಪೋ’ ಪನಯೇನಾ? 😉

ಅಪಾಗ ಅಮ್ಮ ‘ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ’ ಮಂತ್ನ್ದಾ ಯಂಕ್ ಇಷ್ಟ ಆವೊಂದಿತ್ತಿಜ್ಜಿ, ಇತ್ತೇ ಬೇಲೆಗು ಅಂದು ಬೆಂಗಳೂರು ಬತ್ತಿ ಬೊಕ್ಕ ಅವ್ವೆ ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ,ಕೋರಿ ರೊಟ್ಟಿ ನಾಡೊಂದ್ ಕಿಲೋಮೀಟರ್ಗಟ್ಟಲೆ ಪೋದು ತಿನ್ಪೆ, ತಿಂದ ಬೊಕ್ಕ ಅಮ್ಮನ ಕೈ ರುಚಿ ತಿಕ್ಕುಜತ್ತ 😦

ಮನಟ್ ಪನೋನುವೆ ‘ಮಗ,ಮಂತ್ ಕೊರ್ಪುನಗ ಧಿಮಾಕ್ ಮಂತುದು ಕಮೆಂಟು ಹಾಕೊಂದಿತ್ತ ಅತ್ತ ,ಇತ್ತೇ ಇಂಚನೆ ಆವೋಡು’ ಅಂದು

ಹಾಂ ! ಯಾನ್ ಪೂರ ತಿಂಡಿಡು ಎಚ್ಹ್ಹ ಮಿಸ್ ಮನ್ಪುನ ಪಂಡ ‘ಭೂತಾಯಿದ ಫ್ರೈ’ 🙂

ಸೊಲ್ಮೆಲು,
ರಾಕೇಶ್ ಶೆಟ್ಟಿ 🙂

ಮಂಗಳೂರು ಬನ್ಸ್ ಮತ್ತೆ ಬಿಸಿ ಬಿಸಿ ಚಹಾ!

Filed under: ಬ್ಲಾಗ್ಸ್ — ರಾಕೇಶ್ ಶೆಟ್ಟಿ @ 3:56 ಅಪರಾಹ್ನ

ಇಷ್ಟೊತ್ತಿಗೆ ಊರಿನಲ್ಲಿ ಇದ್ದಿದ್ದರೆ ಎಲ್ಲರೊಂದಿಗೆ ಒಟ್ಟಿಗೆ ಊಟ ಮಾಡಿ,ಹರಟಿ ನಿದ್ದೆ ಹೋಗುತಿದ್ದೆ.ಈಗ ಬೆಂಗಳೂರಿನ ರೂಮಿನಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಒಂಟಿಯಾಗಿ ಕುಳಿತವ, ಮುತ್ತಿನಂತ ೩ ದಿನದ ರಜೆಯನ್ನ ಹಾಳು ಮಾಡಿ ಊರಿಗೆ ಹೋಗದಂತೆ ತಡೆದ ಮ್ಯಾನೇಜರ್ಗೆ ಹಿಡಿ ಶಾಪ ಹಾಕಿ ಇದನ್ನ ಬರಿತಿದ್ದೀನಿ.

ಇವತ್ತ್ ಬೆಳಿಗ್ಗೆ ಮಲ್ಲೇಶ್ವರಮ್ಮಿನ ‘ಹಳ್ಳಿ ಮನೆ’ಯಲ್ಲಿ ‘ಮಂಗಳೂರು ಬನ್ಸ್-ಬಿಸಿ ಬಿಸಿ ಚಹಾ’ ಸ್ವಾಹ ಮಾಡಿದವನಿಗೆ ನೆನಪಾಗಿದ್ದು, ಮನೆಯಲ್ಲಿದ್ದಗಾ,ಅಮ್ಮ  ಏನೇ ತಿಂಡಿ ಮಾಡಿದ್ರು ‘ದಿನ ಏನ್ ತಿಂಡಿ ಅಂತ ಮಾಡ್ತಿರಮ್ಮ, ನೀವೇ ತಿನ್ಕೊಳ್ಳಿ ನಂಗ್ ಬೇಡ’ ಅಂತ ಕಮೆಂಟು ಹೊಡೆದು ಹೋಗ್ತಿದ್ದೆ.ಆದ್ರೆ ಈಗ ಬೆಂಗಳೂರಿನಲ್ಲಿ ಹೋಟೆಲ್ನವನಿಗೆನಾದ್ರು ಹಾಗೆ ಹೇಳಿದ್ರೆ ‘ಬೇಕಿದ್ರೆ ತಿನ್ನಪ್ಪ ಇಲ್ಲಾಂದ್ರೆ ಹೋಗು ‘ ಅಂತಾರೆ ಅಷ್ಟೇ 😉

ಆಗ ಅಮ್ಮ  ವೋಡ್ ರೊಟ್ಟಿ,ನೀರ್ ದೋಸೆ,ಬನ್ಸ್,ಗೆಂಡೆ ತಡ್ಯ,ಗೋಳಿ ಬಜೆ ಮಾಡಿದ್ರೆ ಮುಖ ಸಿಂಡರಿಸುತ್ತಿದೆ.ಈಗ ಹೊಟ್ಟೆ ಪಾಡಿಗೆ ಬೆಂಗಳೂರಿಗೆ ಬಂದ ಮೇಲೆ, ಅದೇ ಗೋಳಿ ಬಜೆ,ಬನ್ಸ್,ನೀರ್ ದೋಸೆ,ಕೋರಿ ರೊಟ್ಟಿಯನ್ನ   ಕಿಲೋಮೀಟರ್ಗಟ್ಟಲೆ ಹುಡುಕಿಕೊಂಡು ಹೋಗಿ ತಿಂದು ಬರ್ತೀನಿ.ತಿಂದ ಮೇಲೆ ಅಮ್ಮನ ಕೈರುಚಿ ಸಿಗುವುದಿಲ್ಲವಲ್ಲಾ 😦

ಮನಸಿನಲ್ಲೇ ಅನ್ಕೊಳ್ಳೋದು ‘ಮಗನೆ,ಮಾಡಿ ಕೊಡುವಾಗ ಧಿಮಾಕು,ಕಮೆಂಟು ಹೊಡಿತಿದ್ಯಲ್ಲ,ಹಿಂಗೆ ಆಗ್ಬೇಕು ಬಿಡು’ ಅಂತ.ಎಲ್ಲ ತಿಂಡಿಗಳಿಗಿಂತ ಹೆಚ್ಚಾಗಿ ನಾ ಮಿಸ್ ಮಾಡಿಕೊಳ್ತಾ ಇರೋದು ‘ಭೂತಾಯಿ ಮೀನಿನ ಸಾರು ಮತ್ತೆ ಫ್ರೈ’ 😉

ಹಾಂ! ಅಂದ ಹಾಗೆ ನೀವು ಮಂಗಳೂರು ಬನ್ಸ್ ತಿಂದಿಲ್ಲ ಅಂದ್ರೆ ಒಮ್ಮೆ ತಿಂದು ನೋಡಿ, ಜೊತೆಗೆ ಚಹಾದ ಕಾಂಬಿನೇಶನ್ ಇದ್ರೆ ಮಸ್ತ್!, ನೀವು ಸಸ್ಯಹಾರಿ ಅಲ್ಲವಾದರೆ ‘ಭೂ ತಾಯಿ ಮೀನಿನ ರುಚಿಯೂ ನೋಡಿ,ಹಾಂ! ಬೆಂಗಳೂರಿನಲ್ಲಿ ಭೂತಾಯಿಗೆ ‘ಮತ್ತಿ’ ಅಂತಾರೆ’

« ಹಿಂದಿನ ಪುಟಮುಂದಿನ ಪುಟ »

Create a free website or blog at WordPress.com.

%d bloggers like this: